ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೊಸ ದಾಖಲೆ ನಿರ್ಮಿಸಿದೆ. ಒಂದೇ ದಿನ 11.19 ಲಕ್ಷಕ್ಕೂ ಅಧಿಕ ಮಂದಿ ಮೆಟ್ರೋದಲ್ಲಿ ಸಂಚರಿಸುವ ಮೂಲಕ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.
ಆಗಸ್ಟ್ 10ರಂದು, ಸೋಮವಾರ ಒಂದೇ ದಿನ ನಮ್ಮ ಮೆಟ್ರೋದಲ್ಲಿ ಬರೋಬ್ಬರಿ 11,19,815 ಮಂದಿ ಪ್ರಯಾಣಿಸಿದ್ದಾರೆ. ಈ ಮೂಲಕ ಮೆಟ್ರೋ ಆರಂಭವಾದ ಬಳಿಕದ ಅತಿ ಹೆಚ್ಚಿನ ರೈಡರ್‌ಶಿಪ್ ದಾಖಲಾಗಿದ್ದು, ಹೊಸ ಮೈಲಿಗಲ್ಲು ನಿರ್ಮಾಣವಾಗಿದೆ.
ಇದಕ್ಕೂ ಮುನ್ನ ಕಳೆದ ಐದು ತಿಂಗಳ ಹಿಂದೆ, ಯುಗಾದಿ ಹಬ್ಬದ ಸಂದರ್ಭದಲ್ಲಿ ನಮ್ಮ ಮೆಟ್ರೋದಲ್ಲಿ 10.73 ಲಕ್ಷ ಮಂದಿ ಪ್ರಯಾಣಿಸಿದ್ದು ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಮೀರಿಸುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ.
ನಮ್ಮ ಮೆಟ್ರೋ ಆರಂಭವಾಗಿ 15 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 11 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೆಟ್ರೋ ಸೇವೆ ಬಳಸಿದ್ದಾರೆ.
ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ, ಸಾರ್ವಜನಿಕ ಸಾರಿಗೆಯ ಮೇಲಿನ ಅವಲಂಬನೆ ಹಾಗೂ ಮೆಟ್ರೋ ಜಾಲದ ವಿಸ್ತರಣೆಯಿಂದಾಗಿ ಪ್ರಯಾಣಿಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದೀಗ ಒಂದೇ ದಿನ 11,19,815 ಮಂದಿ ಮೆಟ್ರೋದಲ್ಲಿ ಸಂಚರಿಸಿರುವುದು ಬೆಂಗಳೂರಿನಲ್ಲಿ ಮೆಟ್ರೋ ಸೇವೆಯ ಮೇಲಿನ ಜನರ ಅವಲಂಬನೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ.



