ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವಂದೇ ಮಾತರಂ ಗೀತೆ ರಚನೆಯಾಗಿ 150 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಲಕ್ಷ್ಮೇಶ್ವರದಲ್ಲಿ 150 ಮೀಟರ್ ಉದ್ದದ ರಾಷ್ಟ್ರಧ್ವಜ ಯಾತ್ರೆ ನಡೆಯಿತು.
ಸಾವಿರಾರು ವಿದ್ಯಾರ್ಥಿಗಳು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡ ಯಾತ್ರೆಗೆ ಶಿಗ್ಲಿ ನಾಕಾದ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಚಾಲನೆ ನೀಡಲಾಯಿತು. ಪುರಸಭೆ, ಸೋಮೇಶ್ವರ ಪಾದಗಟ್ಟಿ, ಬಜಾರ ರಸ್ತೆ, ವಿದ್ಯಾರಣ್ಯ ಸರ್ಕಲ್ ಹಾಗೂ ಬಸ್ತಿಬಣ ಮೂಲಕ ಸಾಗಿದ ಯಾತ್ರೆ ಮಹಾಕವಿ ಪಂಪ ವರ್ತುಲದಲ್ಲಿ ಸಮಾವೇಶಗೊಂಡಿತು.
ಸಭೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಬೆಳೆಸಬೇಕು. ಹಿರಿಯರು ದೇಶಕ್ಕೆ ನೀಡಿದ ಕೊಡುಗೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮದಾಗಿದೆ. ರಾಷ್ಟ್ರಧ್ವಜ, ರಾಷ್ಟ್ರಗೀತೆ ಹಾಗೂ ರಾಷ್ಟ್ರೀಯ ಗೀತೆಗಳು ಭಾರತೀಯರ ಹೆಮ್ಮೆಯ ಸಂಕೇತಗಳಾಗಿವೆ ಎಂದರು.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆ.13ರಿಂದ 15ರವರೆಗೆ ಪ್ರತಿಯೊಬ್ಬರೂ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಾಭಿಮಾನ ವ್ಯಕ್ತಪಡಿಸಬೇಕು ಎಂದು ಕರೆ ನೀಡಿದರು.
ವಾಗ್ಮಿ ಅಮೋಘ ಹಿರೇಮಠ ಮಾತನಾಡಿ, ವಂದೇ ಮಾತರಂ ಪ್ರತಿಯೊಬ್ಬ ಭಾರತೀಯನಲ್ಲೂ ಆತ್ಮವಿಶ್ವಾಸ, ಶಕ್ತಿ ಹಾಗೂ ದೇಶಾಭಿಮಾನ ಮೂಡಿಸುವ ಗೀತೆಯಾಗಿದೆ. ಭಾರತದ ಏಕತೆ ಮತ್ತು ಸ್ವಾಭಿಮಾನದ ಜಾಗೃತಿಯಲ್ಲಿ ವಂದೇ ಮಾತರಂ ಮಹತ್ವದ ಪಾತ್ರ ವಹಿಸಿದೆ ಎಂದರು.
ಈ ಸಂದರ್ಭದಲ್ಲಿ ಸುನೀಲ ಮಹಾಂತಶೆಟ್ಟರ, ಫಕ್ಕಿರೇಶ ರಟ್ಟಿಹಳ್ಳಿ, ಅನಿಲ ಮುಳಗುಂದ, ಗಂಗಾಧರ ಮೆಣಸಿನಕಾಯಿ, ಬಸವರಾಜ ಚಕ್ರಸಾಲಿ, ಶಶಿಧರ ರಾನಡೆ, ಪ್ರವೀಣ ಬೋಮಲೆ, ವಿಜಯ ಕುಂಬಾರ, ಈರಣ್ಣ ಪೂಜಾರ ಸೇರಿದಂತೆ ಎಬಿವಿಪಿ ಪ್ರಮುಖರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



