ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರ ದಿನಾಚರಣೆ ಅಂಗವಾಗಿ 2026-27ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಗದಗ ಜಿಲ್ಲೆಯ ವಿವಿಧ ತಾಲೂಕುಗಳ ಒಟ್ಟು 18 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಿಂದ ಬಂದಿದ್ದ ಒಟ್ಟು 32 ಪ್ರಸ್ತಾವನೆಗಳನ್ನು ಪರಿಶೀಲಿಸಿದ ಜಿಲ್ಲಾ ಆಯ್ಕೆ ಸಮಿತಿಯು ಅರ್ಹ ಶಿಕ್ಷಕರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ), ಗದಗ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ ೩ರಂದು ಜಿಲ್ಲಾ ಆಯ್ಕೆ ಸಮಿತಿ ಸಭೆ ನಡೆಯಿತು. ವಿವಿಧ ತಾಲೂಕುಗಳಿಂದ ಜಿಲ್ಲಾ ಹಂತಕ್ಕೆ ಸ್ವೀಕೃತವಾಗಿದ್ದ ಪ್ರಸ್ತಾವನೆಗಳನ್ನು ಪರಿಶೀಲಿಸಿದ ಬಳಿಕ, ಗದಗ ಗ್ರಾಮೀಣ, ಗದಗ ನಗರ, ಮುಂಡರಗಿ, ನರಗುಂದ, ರೋಣ ಹಾಗೂ ಶಿರಹಟ್ಟಿ ತಾಲೂಕುಗಳ ಶಿಕ್ಷಕರನ್ನು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಿ ತೀರ್ಮಾನಿಸಲಾಯಿತು.
ಸೆಪ್ಟೆಂಬರ್ 5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ ಅಂಗವಾಗಿ ಈ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಆಯ್ಕೆಯಾದವರಲ್ಲಿ ಮುಖ್ಯೋಪಾಧ್ಯಾಯರು, ಪ್ರಭಾರಿ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಸಹ ಶಿಕ್ಷಕಿಯರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಚಿತ್ರಕಲಾ ಶಿಕ್ಷಕರು ಸೇರಿದ್ದಾರೆ.
ಗದಗ ಗ್ರಾಮೀಣ ತಾಲೂಕು
ಕಣವಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಗಂಡು ಮಕ್ಕಳ ಶಾಲೆಯ ಸಹ ಶಿಕ್ಷಕಿ ಮಾಸಾಬಿ ಗುಡುಸಾಬ ಮಿರ್ಜಿ, ಹಿರೇಹಂದಿಗೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಭೀಮರೆಡ್ಡಿ ಹೇಮರೆಡ್ಡಿ ಕಾಲವಾಡ ಹಾಗೂ ಯಲಿಶಿರೂರ ಗ್ರಾಮದ ಶ್ರೀಮತಿ ದಂಡವ್ವ ನಾಗಪ್ಪ ಯಲಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಚಂದ್ರಶೇಖರ ಫಕ್ಕೀರಪ್ಪ ಜೋಗಿನ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಗದಗ ನಗರ ತಾಲೂಕು
ಗದಗ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ. 11ರ ಸಹ ಶಿಕ್ಷಕಿ ಬಿ.ವಿ. ಕುಲಕರ್ಣಿ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ. 04ರ ಸಹ ಶಿಕ್ಷಕಿ ನಸೀಮಾ ಹುಸೇನಸಾಬ ಜಕ್ಕಲಿ ಹಾಗೂ ಸರ್ಕಾರಿ ಉರ್ದು ಪ್ರೌಢಶಾಲೆಯ ಸಹ ಶಿಕ್ಷಕ ಎಂ.ಎಂ. ಮಕಾನದಾರ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮುಂಡರಗಿ ತಾಲೂಕು
ಮುಂಡರಗಿ ಪಟ್ಟಣದ ಹೆಸರೂರ ರಸ್ತೆಯಲ್ಲಿರುವ ಡಾ. ಬಸವರಾಜ ಶಿವಪ್ಪ ಮೇಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಬಸವರಾಜ ರಾಮಪ್ಪ ಹೆಬ್ಬಳಿ, ಮುಕ್ತುಂಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಅಕ್ಕಮಹಾದೇವಿ ಆರ್. ಕೊಟ್ಟೂರಶೆಟ್ಟಿ ಹಾಗೂ ಡೋಣಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಸಹ ಶಿಕ್ಷಕ ಎ.ವಿ. ಶಿವನಗೌಡರ ಅವರು ಆಯ್ಕೆಯಾಗಿದ್ದಾರೆ.
ನರಗುಂದ ತಾಲೂಕು
ಜಗಾಪೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಪ್ರಧಾನ ಗುರು ಎಂ.ಆರ್. ಬಡಿಗೇರ, ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಬಿ.ಬಿ. ಮತ್ತಿಕಟ್ಟಿ ಹಾಗೂ ನರಗುಂದ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಬಿ.ಕೆ. ವಗ್ಗರ್ ಅವರು ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರೋಣ ತಾಲೂಕು
ಹುಲ್ಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಮಂಜುನಾಥ ಎಚ್. ಕಡಿವಾಲ, ರೋಣ ಪಟ್ಟಣದ ವಿದ್ಯಾಚೇತನ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಮಹಾಂತೇಶ ಶ್ರೀಮಂತ ಹೊಸಮನಿ ಹಾಗೂ ಕೊತಬಾಳ ಗ್ರಾಮದ ಶ್ರೀ ಗುರು ಅಡವಿಸಿದ್ದೇಶ್ವರ ಅನುದಾನಿತ ಪ್ರೌಢಶಾಲೆಯ ಸಹ ಶಿಕ್ಷಕ ಎಸ್.ವಿ. ಡಣಾಪೂರ ಅವರು ಆಯ್ಕೆಯಾಗಿದ್ದಾರೆ.
ಶಿರಹಟ್ಟಿ ತಾಲೂಕು
ರಣತೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಎಂ. ಗಂಗಮ್ಮ, ಬಟ್ಟೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎಂ.ಎಸ್. ಕಾಳೆ ಹಾಗೂ ಮಜ್ಜೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ಎ.)ಯ ಪ್ರಭಾರಿ ಮುಖ್ಯೋಪಾಧ್ಯಾಯ ಬಸಪ್ಪ ತೆಲಸಂಗ ಅವರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೀಡಿರುವ ಕೊಡುಗೆ ಹಾಗೂ ಶಾಲೆಗಳ ಅಭಿವೃದ್ಧಿಗೆ ನೀಡಿದ ಮಹತ್ವದ ಕೊಡುಗೆಯನ್ನು ಪರಿಗಣಿಸಿ ಈ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಒಟ್ಟು 32 ಪ್ರಸ್ತಾವನೆಗಳ ಪೈಕಿ 18 ಶಿಕ್ಷಕರನ್ನು ಜಿಲ್ಲಾ ಆಯ್ಕೆ ಸಮಿತಿಯ ಸರ್ವ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿ ತೀರ್ಮಾನಿಸಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ), ಗದಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



