ಬೆಂಗಳೂರು: ಹಿರಿಯ ನಟ ದೊಡ್ಡಣ್ಣ ಅವರ ನಿಧನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಸುಳ್ಳು ಸುದ್ದಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ಸ್ವತಃ ದೊಡ್ಡಣ್ಣ ಅವರೇ ಈ ವದಂತಿಯನ್ನು ಅಲ್ಲಗಳೆದಿದ್ದಾರೆ.
ಸಾಮಾಜಿಕ ಜಾಲತಾಣದ ಒಂದು ಪುಟದಲ್ಲಿ “ದೊಡ್ಡಣ್ಣ ಇನ್ನಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಶ್ರದ್ಧಾಂಜಲಿ ಪೋಸ್ಟರ್ ಪ್ರಕಟಿಸಲಾಗಿತ್ತು. “ನಿಮ್ಮ ಅಭಿನಯ ಮತ್ತು ಸಾಧನೆ ಯಾವಾಗಲೂ ನಮ್ಮೊಂದಿಗೆ ಇರುತ್ತದೆ” ಎಂಬ ಸಂದೇಶದೊಂದಿಗೆ ಪೋಸ್ಟ್ ವೈರಲ್ ಆಗಿತ್ತು.
ಈ ಬೆಳವಣಿಗೆಯಿಂದ ಆತಂಕಗೊಂಡ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿರುವ ದೊಡ್ಡಣ್ಣ, “ನಾನು ಆರೋಗ್ಯವಾಗಿದ್ದೇನೆ. ಮನೆಯಲ್ಲೇ ನೆಮ್ಮದಿಯಿಂದ ಇದ್ದೇನೆ. ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು” ಎಂದು ಹೇಳಿದ್ದಾರೆ.
ನಕಲಿ ಪೋಸ್ಟರ್‌ಗಳನ್ನು ಸೃಷ್ಟಿಸಿ ಸುಳ್ಳು ಸುದ್ದಿ ಹರಡುತ್ತಿರುವ ಕಿಡಿಗೇಡಿಗಳ ವಿರುದ್ಧ ಸಾಮಾಜಿಕ ಜಾಲತಾಣ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.



