ಬೆಂಗಳೂರು: ನಗರದಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವು ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದ್ದು, ಇದೀಗ ಫುಟ್ಪಾತ್ ಮೇಲಿರುವ ಸರ್ಕಾರಿ ಸ್ವಾಮ್ಯದ ಮಳಿಗೆಗಳಿಗೂ ತೆರವು ಭೀತಿ ಎದುರಾಗಿದೆ.
ಬೆಂಗಳೂರಿನಾದ್ಯಂತ ಸುಮಾರು 1,500 ಕಿಲೋಮೀಟರ್ ಪಾದಚಾರಿ ಮಾರ್ಗಗಳನ್ನು ಒತ್ತುವರಿಯಿಂದ ಮುಕ್ತಗೊಳಿಸುವ ಗುರಿಯನ್ನು ಹೊಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಈಗಾಗಲೇ 500 ಕಿಲೋಮೀಟರ್ಗೂ ಹೆಚ್ಚು ಫುಟ್ಪಾತ್ಗಳನ್ನು ತೆರವುಗೊಳಿಸಿದೆ.
ಈ ನಡುವೆ ಫುಟ್ಪಾತ್ ಮೇಲೆ ವ್ಯಾಪಾರ ನಡೆಸುತ್ತಿದ್ದ ಸಣ್ಣ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿದ ಅಧಿಕಾರಿಗಳು, ಅದೇ ಸ್ಥಳದಲ್ಲಿರುವ ಸರ್ಕಾರಿ ಸಂಸ್ಥೆಗಳಾದ ನಂದಿನಿ ಬೂತ್, ಹಾಪ್ಕಾಮ್ಸ್ ಹಾಗೂ ಬೆಸ್ಕಾಂ ಟ್ರಾನ್ಸ್ಫಾರ್ಮರ್ಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.
ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಜಿಬಿಎ ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ, “ಒತ್ತುವರಿ ತೆರವು ನಿಯಮ ಎಲ್ಲರಿಗೂ ಒಂದೇ. ಫುಟ್ಪಾತ್ ಮೇಲಿರುವ ಸರ್ಕಾರಿ ಸ್ವಾಮ್ಯದ ಮಳಿಗೆಗಳನ್ನೂ ತೆರವುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ನಂದಿನಿ ಬೂತ್, ಹಾಪ್ಕಾಮ್ಸ್ ಮಳಿಗೆಗಳು ಹಾಗೂ ಫುಟ್ಪಾತ್ಗೆ ಅಡ್ಡಿಯಾಗಿರುವ ಬೆಸ್ಕಾಂನ ಅಪಾಯಕಾರಿ ಟ್ರಾನ್ಸ್ಫಾರ್ಮರ್ಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಅಥವಾ ತೆರವುಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ಜಿಬಿಎ ಅಧಿಕಾರಿಗಳು ಮನವಿ ಸಲ್ಲಿಸುತ್ತಿದ್ದಾರೆ.
ವ್ಯಾಪಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಜಿಬಿಎ, ಇದೀಗ ಸರ್ಕಾರಿ ಸಂಸ್ಥೆಗಳ ಮಳಿಗೆಗಳ ಮೇಲೂ ಇದೇ ರೀತಿಯ ಕ್ರಮ ಕೈಗೊಳ್ಳುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.



