ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಯ ಬರಿಮಾರು ಸಮೀಪದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಐದು ವರ್ಷದ ಬಾಲಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಕಲ್ಲಡ್ಕ ಶ್ರೀರಾಮ ಶಾಲೆಯ ಯುಕೆಜಿ ವಿದ್ಯಾರ್ಥಿನಿ ಚಿರನ್ವಿ ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಶಾಲೆ ಮುಗಿಸಿಕೊಂಡು ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿದ್ದ ಶಾಲಾ ವಾಹನದ ಮೇಲೆ ಬೃಹತ್ ಮರವೊಂದು ಏಕಾಏಕಿ ಬಿದ್ದಿದೆ.
ಮರ ಬಿದ್ದ ಪರಿಣಾಮ ವಾಹನದಲ್ಲಿದ್ದ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲು ಸ್ಥಳೀಯರು ಹಾಗೂ ಶಾಲಾ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಚಿರನ್ವಿಯನ್ನು ಆಟೋ ಮೂಲಕ ಪುತ್ತೂರು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ಮಾರ್ಗ ಮಧ್ಯದಲ್ಲಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಗಾಯಗೊಂಡಿರುವ ಇಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲಾ ವಾಹನದ ಮೇಲೆ ಮರ ಬೀಳಲು ಕಾರಣ ಹಾಗೂ ಘಟನೆಯ ಸಂಪೂರ್ಣ ವಿವರಗಳ ಬಗ್ಗೆ ತನಿಖೆ ಮುಂದುವರಿದಿದೆ.
ಐದು ವರ್ಷದ ಬಾಲಕಿಯ ಸಾವಿನ ಸುದ್ದಿ ಕಲ್ಲಡ್ಕ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.



