ಹೈದರಾಬಾದ್: ಸ್ಟಾರ್ ನಟನಾಗಿ ಬೆಳೆಯುವ ಮೊದಲು ಕನಸು ಕಂಡ ಯುವಕನಿಂದ ಇಂದಿನ ಸೂಪರ್ಸ್ಟಾರ್ವರೆಗೆ ಸಾಗಿದ ಹತ್ತು ವರ್ಷದ ಪಯಣವನ್ನು ವಿಜಯ್ ದೇವರಕೊಂಡ ಭಾವುಕರಾಗಿ ನೆನಪಿಸಿಕೊಂಡಿದ್ದಾರೆ. ತಮ್ಮ ಜೀವನವನ್ನೇ ಬದಲಿಸಿದ ‘ಪೆಳ್ಳಿ ಚೂಪುಲು’ ಸಿನಿಮಾ ಬಿಡುಗಡೆಯಾಗಿ ದಶಕ ಪೂರೈಸಿದ ಹಿನ್ನೆಲೆ, ಹಳೆಯ ನೆನಪುಗಳನ್ನು ಹಂಚಿಕೊಂಡು ಅಭಿಮಾನಿಗಳು ಹಾಗೂ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
‘ಪೆಳ್ಳಿ ಚೂಪುಲು’ ಚಿತ್ರದ ಶೂಟಿಂಗ್ ವೇಳೆ ಸೆರೆಹಿಡಿದ ಅಪರೂಪದ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿರುವ ವಿಜಯ್, ಹತ್ತು ವರ್ಷಗಳು ಕ್ಷಣಾರ್ಧದಲ್ಲಿ ಕಳೆದುಹೋಗಿವೆ ಎಂದು ಬರೆದುಕೊಂಡಿದ್ದಾರೆ. ಅಂದು ಪ್ರೇಕ್ಷಕರು ನೀಡಿದ ಪ್ರೋತ್ಸಾಹವೇ ತಮ್ಮ ವೃತ್ತಿಜೀವನದ ಭದ್ರ ಅಡಿಪಾಯವಾಗಿದ್ದು, ಆ ಪ್ರೀತಿಗೆ ಎಂದೆಂದಿಗೂ ಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.
ಚಿತ್ರಕ್ಕೆ ಎರಡು ರಾಷ್ಟ್ರ ಪ್ರಶಸ್ತಿಗಳು ಬಂದಿದ್ದನ್ನು ಹೆಮ್ಮೆಯಿಂದ ಉಲ್ಲೇಖಿಸಿರುವ ಅವರು, ನಿರ್ದೇಶಕ ತರುಣ್ ಭಾಸ್ಕರ್ ಅವರನ್ನು ವಿಶೇಷವಾಗಿ ನೆನೆದಿದ್ದಾರೆ. “ಅವರ ಜೊತೆ ಕೆಲಸ ಮಾಡಿದ ಅನುಭವ ನನ್ನ ಬದುಕಿನ ದೊಡ್ಡ ಪಾಠ. ಆಗಿದ್ದ ಮುಗ್ಧತೆ ಈಗಿಲ್ಲ. ಈಗ ಪ್ರತಿಯೊಂದು ಹೆಜ್ಜೆಯಲ್ಲೂ ಜವಾಬ್ದಾರಿಯ ತೂಕ ಹೆಚ್ಚಾಗಿದೆ” ಎಂದು ವಿಜಯ್ ತಮ್ಮ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
‘ಪೆಳ್ಳಿ ಚೂಪುಲು’ ಚಿತ್ರದ ಯಶಸ್ಸೇ ವಿಜಯ್ ದೇವರಕೊಂಡ ಅವರನ್ನು ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಾಯಕನಾಗಿ ಸ್ಥಾಪಿಸಿತು. ನಂತರ ‘ಅರ್ಜುನ್ ರೆಡ್ಡಿ’ ಹಾಗೂ ‘ಗೀತ ಗೋವಿಂದಂ’ ಮೂಲಕ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದರು. ಸದ್ಯ ಕೀರ್ತಿ ಸುರೇಶ್ ಅಭಿನಯದ ‘ರೌಡಿ ಜನಾರ್ದನ’, ರಶ್ಮಿಕಾ ಮಂದಣ್ಣ ಜೊತೆಗಿನ ‘ರಣಬಾಲಿ’ ಹಾಗೂ ನಿರ್ದೇಶಕ ಶೌರ್ಯುವ್ ಅವರ ಹೊಸ ಪ್ರಾಜೆಕ್ಟ್ಗಳಲ್ಲಿ ವಿಜಯ್ ದೇವರಕೊಂಡ ನಿರತರಾಗಿದ್ದಾರೆ.



