ಇಂಗ್ಲೆಂಡ್: ಇಂಗ್ಲೆಂಡ್‌ನ ದೇಶೀಯ ಕ್ರಿಕೆಟ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ವೋರ್ಸೆಸ್ಟರ್‌ಶೈರ್ ತಂಡದ ನಾಯಕ ಜೇಕ್ ಲಿಬ್ಬಿ ಲಿಸ್ಟ್-ಎ ಕ್ರಿಕೆಟ್ ಇತಿಹಾಸದಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಮೆಟ್ರೋ ಬ್ಯಾಂಕ್ ಒನ್-ಡೇ ಕಪ್ ಟೂರ್ನಿಯಲ್ಲಿ ವೋರ್ಸೆಸ್ಟರ್‌ಶೈರ್ ಪರ ಕಣಕ್ಕಿಳಿದಿರುವ ಜೇಕ್ ಲಿಬ್ಬಿ ಸತತ ನಾಲ್ಕು ಪಂದ್ಯಗಳಲ್ಲಿ ನಾಲ್ಕು ಶತಕಗಳನ್ನು ಸಿಡಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಅದ್ಭುತ ಪ್ರದರ್ಶನದ ಪರಿಣಾಮ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಕನಿಷ್ಠ 50 ಇನಿಂಗ್ಸ್ ಆಡಿರುವ ಬ್ಯಾಟರ್‌ಗಳ ಪೈಕಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿರುವ ಆಟಗಾರ ಎಂಬ ಹೊಸ ದಾಖಲೆ ಲಿಬ್ಬಿ ಪಾಲಾಗಿದೆ.
ಇದಕ್ಕೂ ಮುನ್ನ ಈ ದಾಖಲೆ ಭಾರತದ ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಅವರ ಹೆಸರಿನಲ್ಲಿತ್ತು. ಲಿಸ್ಟ್-ಎ ಕ್ರಿಕೆಟ್‌ನಲ್ಲಿ 100 ಇನಿಂಗ್ಸ್‌ಗಳನ್ನು ಆಡಿರುವ ಗಾಯಕ್ವಾಡ್ 58.61ರ ಸರಾಸರಿಯಲ್ಲಿ 5,334 ರನ್ ಗಳಿಸಿದ್ದರು.
ಆದರೆ ಸತತ ಶತಕಗಳ ಮೂಲಕ ಅಬ್ಬರಿಸಿರುವ ಜೇಕ್ ಲಿಬ್ಬಿ ಇದೀಗ ಗಾಯಕ್ವಾಡ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಈವರೆಗೆ 54 ಇನಿಂಗ್ಸ್‌ಗಳನ್ನು ಆಡಿರುವ ಲಿಬ್ಬಿ, 62.46ರ ಅತ್ಯುತ್ತಮ ಬ್ಯಾಟಿಂಗ್ ಸರಾಸರಿಯಲ್ಲಿ ಒಟ್ಟು 2,561 ರನ್‌ಗಳನ್ನು ಕಲೆಹಾಕಿದ್ದಾರೆ.
ಇದರೊಂದಿಗೆ ಕನಿಷ್ಠ 50 ಲಿಸ್ಟ್-ಎ ಇನಿಂಗ್ಸ್‌ಗಳನ್ನು ಆಡಿರುವ ಬ್ಯಾಟರ್‌ಗಳ ಪೈಕಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಜೇಕ್ ಲಿಬ್ಬಿ ಪಾತ್ರರಾಗಿದ್ದಾರೆ.
ಲಿಬ್ಬಿಯ ಈ ಸಾಧನೆಯ ವಿಶೇಷತೆ ಏನೆಂದರೆ, ಅವರು ವಿಶ್ವ ಕ್ರಿಕೆಟ್‌ನ ದಿಗ್ಗಜ ಬ್ಯಾಟರ್‌ಗಳಾದ ಆಸ್ಟ್ರೇಲಿಯಾದ ಮೈಕಲ್ ಬೆವನ್ ಹಾಗೂ ಭಾರತದ ವಿರಾಟ್ ಕೊಹ್ಲಿಯನ್ನೂ ಹಿಂದಿಕ್ಕಿದ್ದಾರೆ. ಬೆವನ್ 57.86ರ ಸರಾಸರಿಯೊಂದಿಗೆ ಈ ಪಟ್ಟಿಯಲ್ಲಿದ್ದರೆ, ವಿರಾಟ್ ಕೊಹ್ಲಿ 57.80ರ ಸರಾಸರಿ ಹೊಂದಿದ್ದಾರೆ.
ಸತತ ನಾಲ್ಕು ಶತಕಗಳೊಂದಿಗೆ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿರುವ ಜೇಕ್ ಲಿಬ್ಬಿ ಇದೀಗ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಆದರೆ ಇಷ್ಟೊಂದು ಅದ್ಭುತ ದೇಶೀಯ ದಾಖಲೆ ಹೊಂದಿದ್ದರೂ ಲಿಬ್ಬಿ ಇನ್ನೂ ಇಂಗ್ಲೆಂಡ್‌ನ ಏಕದಿನ ತಂಡದಲ್ಲಿ ಸ್ಥಾನ ಪಡೆಯದಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.



