ಮುಂಬೈ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ಅಜಿಂಕ್ಯ ರಹಾನೆ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಭಾರತೀಯ ಕ್ರಿಕೆಟ್ನ ಎಲ್ಲಾ ಮಾದರಿಗಳಿಗೂ ವಿದಾಯ ಹೇಳಿದ್ದಾರೆ.
ಇದರೊಂದಿಗೆ ಭಾರತೀಯ ಕ್ರಿಕೆಟ್ನಲ್ಲಿ ರಹಾನೆ ಅವರ ಸುದೀರ್ಘ ಪಯಣ ಅಂತ್ಯಗೊಂಡಿದೆ.
ತಮ್ಮ ಕೊನೆಯ ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದ ರಹಾನೆ, ಇದೀಗ ಐಪಿಎಲ್ಗೂ ವಿದಾಯ ಹೇಳಿರುವುದರಿಂದ ಕೆಕೆಆರ್ ಫ್ರಾಂಚೈಸಿ ಮುಂದಿನ ಆವೃತ್ತಿಗೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
6 ತಂಡಗಳ ಪರ ಆಡಿದ್ದ ರಹಾನೆ;
ಅಜಿಂಕ್ಯ ರಹಾನೆ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು ಆರು ತಂಡಗಳ ಪರ ಆಡಿದ್ದಾರೆ. ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ರೈಸಿಂಗ್ ಪುಣೆ ಸೂಪರ್ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳನ್ನು ಅವರು ಪ್ರತಿನಿಧಿಸಿದ್ದರು.
ಇವುಗಳಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಾಯಕತ್ವವನ್ನೂ ರಹಾನೆ ವಹಿಸಿದ್ದರು. ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು ಕೆಕೆಆರ್ ನಾಯಕನಾಗಿಯೇ ಆಡಿದ ಅವರು, ಇದೀಗ ಇದೇ ತಂಡದ ಮೂಲಕ ಐಪಿಎಲ್ ವೃತ್ತಿಜೀವನಕ್ಕೂ ತೆರೆ ಎಳೆದಿದ್ದಾರೆ.
ರಹಾನೆ ಐಪಿಎಲ್ ಅಂಕಿಅಂಶ:
ಅಜಿಂಕ್ಯ ರಹಾನೆ ಐಪಿಎಲ್ನಲ್ಲಿ ಒಟ್ಟು 212 ಪಂದ್ಯಗಳನ್ನು ಆಡಿದ್ದು, 5,367 ರನ್ಗಳನ್ನು ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 30.15 ಆಗಿದೆ. ಐಪಿಎಲ್ ವೃತ್ತಿಜೀವನದಲ್ಲಿ ಅವರು 2 ಶತಕ ಹಾಗೂ 35 ಅರ್ಧಶತಕಗಳನ್ನು ಬಾರಿಸಿದ್ದಾರೆ.
ವಿದೇಶಿ ಲೀಗ್ನಲ್ಲಿ ಹೊಸ ಇನಿಂಗ್ಸ್;
ಭಾರತೀಯ ಕ್ರಿಕೆಟ್ಗೆ ವಿದಾಯ ಹೇಳಿದ ಬೆನ್ನಲ್ಲೇ ರಹಾನೆ ಅವರಿಗೆ ವಿದೇಶಿ ಟಿ20 ಲೀಗ್ನಿಂದ ಅವಕಾಶ ದೊರೆತಿದೆ. ಬಿಸಿಸಿಐ ನಿಯಮಗಳ ಪ್ರಕಾರ ಭಾರತೀಯ ಕ್ರಿಕೆಟ್ನಿಂದ ನಿವೃತ್ತರಾದ ಆಟಗಾರರು ವಿದೇಶಿ ಲೀಗ್ಗಳಲ್ಲಿ ಆಡುವ ಅವಕಾಶ ಹೊಂದಿರುತ್ತಾರೆ.
ಆಗಸ್ಟ್ 26ರಿಂದ ಆರಂಭವಾಗಲಿರುವ ಚೊಚ್ಚಲ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ನಲ್ಲಿ ರಹಾನೆ ‘ಆಮ್ಸ್ಟರ್ಡ್ಯಾಮ್ ಫ್ಲೇಮ್ಸ್’ ತಂಡದ ಪ್ರಮುಖ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟೀವ್ ವಾ ಈ ತಂಡದ ಸಹ-ಮಾಲೀಕರಾಗಿದ್ದು, ರಹಾನೆ ಅವರ ನಾಯಕತ್ವದ ಗುಣಗಳನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಭಾರತೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ರಹಾನೆ, ಇದೀಗ ವಿದೇಶಿ ಟಿ20 ಲೀಗ್ ಮೂಲಕ ತಮ್ಮ ಕ್ರಿಕೆಟ್ ಜೀವನದ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ.



