ಮೈಸೂರು: ಕನ್ನಡ ನಾಡಿನಲ್ಲಿಯೇ ಕನ್ನಡ ಭಾಷೆಯನ್ನು ರಕ್ಷಿಸಲು ‘ಕನ್ನಡ ಕಾವಲು ಸಮಿತಿ’ ಇರಬೇಕಾದ ಪರಿಸ್ಥಿತಿ ಇರುವುದು ಬೇಸರದ ಸಂಗತಿ ಮತ್ತು ದುರ್ದೈವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರ ನೂತನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಯ ಸ್ಥಿತಿಗತಿ ಹಾಗೂ ತಮ್ಮ ಆರಂಭಿಕ ರಾಜಕೀಯ ದಿನಗಳನ್ನು ಸ್ಮರಿಸಿಕೊಂಡರು.
“ನಾನು ಸಾಹಿತಿಯಲ್ಲ, ಕೇವಲ ಸಾಹಿತ್ಯದ ಅಭಿಮಾನಿ. ಮೊದಲ ಬಾರಿಗೆ ಶಾಸಕನಾದಾಗ ನನಗೆ ಬೇಡ ಎಂದರೂ ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆ ಜವಾಬ್ದಾರಿಯನ್ನು ವಹಿಸಿಕೊಂಡು ಕೆಲಸ ಮಾಡಿದ್ದೆ” ಎಂದು ಹೇಳಿದರು.
ನೆರೆಯ ರಾಜ್ಯಗಳಲ್ಲಿ ಇಂತಹ ಸಮಿತಿಗಳಿಲ್ಲ!
ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ನೆರೆಯ ರಾಜ್ಯಗಳಲ್ಲಿ ತಮ್ಮ ಭಾಷೆಯನ್ನು ರಕ್ಷಿಸಲು ಇಂತಹ ಕಾವಲು ಸಮಿತಿಗಳಿಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಕನ್ನಡ ಭಾಷೆಯನ್ನು ಕಾಯಲು ಸಮಿತಿ ಇರಬೇಕಾದ ಪರಿಸ್ಥಿತಿ ಇರುವುದು ಆಲೋಚಿಸಬೇಕಾದ ವಿಚಾರ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನನಗೆ 100 ವರ್ಷ ಬದುಕುವ ಆಸೆ ಇದೆ!
ಇದೇ ವೇಳೆ ತಮ್ಮ ಆಯುಷ್ಯದ ಬಗ್ಗೆಯೂ ಮಾತನಾಡಿದ ಸಿದ್ದರಾಮಯ್ಯ, “ನನಗೆ 100 ವರ್ಷ ಬದುಕಬೇಕು ಎಂಬ ಆಸೆಯಿದೆ. ಆದರೆ, ಅದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಜೀವಿತಾವಧಿ ನಮ್ಮ ಕೈಯಲ್ಲಿಲ್ಲ” ಎಂದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು 100 ವರ್ಷ ಮಾತ್ರವಲ್ಲ, 120 ವರ್ಷಗಳ ಕಾಲವೂ ಸಕ್ರಿಯವಾಗಿ ಬದುಕಲಿ ಎಂದು ಹಾರೈಸಿದ ಅವರು, ಮೊಯ್ಲಿ ಅವರ ಅಪಾರ ಸಾಹಿತ್ಯಿಕ ಕೊಡುಗೆಗೆ ಜ್ಞಾನಪೀಠ ಪ್ರಶಸ್ತಿ ದೊರೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.








