ಚೆನ್ನೈ: ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ನಟಿ ಹಾಗೂ ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ ಇನ್ನು ನೆನಪು ಮಾತ್ರ. ವಯೋಸಹಜ ಆರೋಗ್ಯ ಸಮಸ್ಯೆ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 95 ವರ್ಷದ ನಟಿ, ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.
1931ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದ ಸಾಹುಕಾರ್ ಜಾನಕಿ ಮೂಲತಃ ಕನ್ನಡಿಗರಾಗಿದ್ದು, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತದ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿದ್ದರು.
1950ರಲ್ಲಿ ‘ಸಾಹುಕಾರ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ಆ ಸಿನಿಮಾದ ಯಶಸ್ಸಿನಿಂದಲೇ ‘ಸಾಹುಕಾರ್ ಜಾನಕಿ’ ಎಂಬ ಹೆಸರಿನಿಂದ ಖ್ಯಾತರಾದರು. ಬಳಿಕ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದರು.
ಕನ್ನಡದಲ್ಲಿ ‘ಮಹಿಷಾಸುರ ಮರ್ದಿನಿ’, ‘ಸಾಕುಮಗಳು’, ‘ಕನ್ಯಾರತ್ನ’, ‘ಗೌರಿ’, ‘ರತ್ನಗಿರಿ ರಹಸ್ಯ’, ‘ನವಕೋಟಿ ನಾರಾಯಣ’, ‘ನಿರಪರಾಧಿ’ ಹಾಗೂ ‘ಮನಸಾಕ್ಷಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಡಾ. ರಾಜ್ಕುಮಾರ್ ಅವರೊಂದಿಗೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದ ಅವರು, ‘ಶಬ್ದವೇಧಿ’ಯಲ್ಲಿ ತಾಯಿಯ ಪಾತ್ರದ ಮೂಲಕವೂ ಗಮನ ಸೆಳೆದಿದ್ದರು.
ತಮಿಳಿನಲ್ಲಿ ‘ವಲಯಪತಿ’ ಮೂಲಕ ವೃತ್ತಿಜೀವನ ಆರಂಭಿಸಿದ ಸಾಹುಕಾರ್ ಜಾನಕಿ, ‘ಪನಮ್ ಪಡುತುಂ ಪಾಡು’, ‘ಪುತಿಯ ಪರವೈ’, ‘ನೀರ್ಕುಮಿಝಿ’, ‘ಇರು ಕೋಡುಗಲ್’, ‘ದಿಲ್ಲು ಮುಲ್ಲು’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ‘ಬಿಸ್ಕೋತ್’ ಅವರ ಕೊನೆಯ ತಮಿಳು ಚಿತ್ರವಾಗಿತ್ತು.
ಕೇವಲ ಬೆಳ್ಳಿತೆರೆಗೆ ಸೀಮಿತವಾಗದೆ ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದ ಸಾಹುಕಾರ್ ಜಾನಕಿ ಅವರ ಸುದೀರ್ಘ ಕಲಾ ಸೇವೆಗೆ 2022ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ಸಾಹುಕಾರ್ ಜಾನಕಿ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.



