ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟೆಲಿಪ್ರಾಂಪ್ಟರ್ ಬಳಸದೆ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಿ ತೋರಿಸಿದರೆ ತಾನು ರಾಜೀನಾಮೆ ನೀಡುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ವಂದೇ ಮಾತರಂ ಗೀತೆಯ ಎರಡು ಪ್ಯಾರಗಳನ್ನು ಮಾತ್ರ ಹಾಡುವ ಕಾಂಗ್ರೆಸ್ನ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, 1937ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್ ಹಾಗೂ ರವೀಂದ್ರನಾಥ ಟ್ಯಾಗೋರ್ ಸೇರಿದಂತೆ ಪ್ರಮುಖ ನಾಯಕರು ಚರ್ಚಿಸಿ ಎರಡು ಪ್ಯಾರಗಳನ್ನು ಹಾಡುವ ನಿರ್ಧಾರಕ್ಕೆ ಬಂದಿದ್ದರು. ಅದನ್ನೇ ಕಾಂಗ್ರೆಸ್ ಮುಂದುವರಿಸಿಕೊಂಡು ಬಂದಿದೆ ಎಂದು ಹೇಳಿದರು.
ಬಿಜೆಪಿ ನಾಯಕರು ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಿ ತೋರಿಸಲಿ. ಅವರಿಗೆ ಸಂಪೂರ್ಣ ಗೀತೆ ಬರುತ್ತದೆಯೇ ಎಂಬುದನ್ನು ನೋಡೋಣ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು. ಕನಿಷ್ಠ ಮೊದಲ ಎರಡು ಪ್ಯಾರಗಳನ್ನಾದರೂ ಹಾಡಿ ತೋರಿಸಲಿ ಎಂದು ಸವಾಲು ಹಾಕಿದರು.
ಇದೇ ವೇಳೆ ಆರ್ಎಸ್ಎಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ದೇಶಭಕ್ತಿಯ ಬಗ್ಗೆ ಮಾತನಾಡುವವರು ಆರ್ಎಸ್ಎಸ್ ಶಾಖೆಗಳಲ್ಲಿ ‘ನಮಸ್ತೇ ಸದಾ ವತ್ಸಲೇ’ ಬದಲಿಗೆ ವಂದೇ ಮಾತರಂ ಹಾಡಲಿ. ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿ ಬಳಿಕ ದೇಶಭಕ್ತಿಯ ಬಗ್ಗೆ ಮಾತನಾಡಲಿ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ನ ಕೊಡುಗೆ ಏನು ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ನೆಹರೂ, ಪಟೇಲ್, ಬೋಸ್ ಹಾಗೂ ಟ್ಯಾಗೋರ್ ಅವರಂತಹ ನಾಯಕರ ದೇಶಭಕ್ತಿಯನ್ನು ಪ್ರಶ್ನಿಸುವುದು ಸರಿಯಲ್ಲ ಎಂದರು.
ಇದೇ ವೇಳೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಪಿಎಂ ಕೇರ್ಸ್ ಫಂಡ್, ರಾಮಮಂದಿರ ಚಂದಾ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗದಂತೆ ಮಾಡಲು ವಂದೇ ಮಾತರಂ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ ಎಂದು ಆರೋಪಿಸಿದರು. ಜೆನ್-ಝಡ್ ಪ್ರತಿಭಟನೆ, ವಿದೇಶಾಂಗ ನೀತಿ ಹಾಗೂ ರೈತರ ಸಮಸ್ಯೆಗಳ ಬಗ್ಗೆಯೂ ಕೇಂದ್ರ ಸರ್ಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.



