ಬೆಂಗಳೂರು: ಆಷಾಢ ಮಾಸ ಮುಗಿದು ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸಾಲು ಸಾಲು ಹಬ್ಬಗಳ ಸಂಭ್ರಮ ಶುರುವಾಗಿದೆ.
ಶ್ರಾವಣ ಮಾಸದ ಪ್ರಮುಖ ಹಬ್ಬವಾದ ವರಮಹಾಲಕ್ಷ್ಮೀ ಹಬ್ಬಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಅದರಲ್ಲೂ ಕೆ.ಆರ್. ಮಾರ್ಕೆಟ್ನಲ್ಲಿ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.
ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವಿದ್ದರೂ ಬುಧವಾರದಿಂದಲೇ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಕೆ.ಆರ್. ಮಾರ್ಕೆಟ್ನ ಹೂವಿನ ಮಾರುಕಟ್ಟೆಯಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಜನ ಸೇರಿದ್ದಾರೆ. ಹಬ್ಬದ ದಿನ ಹೂವುಗಳ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂಬ ಆತಂಕದಿಂದ ಹಲವರು ಮುಂಚಿತವಾಗಿಯೇ ಹೂವುಗಳನ್ನು ಖರೀದಿಸುತ್ತಿದ್ದಾರೆ.
ಯಾವ ಹೂವಿಗೆ ಎಷ್ಟು ಬೆಲೆ?
ಹಬ್ಬದ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಲವು ಹೂವುಗಳ ಬೆಲೆ ಏರಿಕೆಯಾಗಿದೆ.
- ಕನಕಾಂಬರ: ಕೆಜಿಗೆ ₹3,000–₹4,000
- ಮಲ್ಲಿಗೆ: ಕೆಜಿಗೆ ₹1,000–₹2,000
- ಮಳ್ಳೆ ಹೂವು: ಕೆಜಿಗೆ ₹600–₹800
- ಕಾಕಡ ಹೂವು: ಕೆಜಿಗೆ ₹600–₹700
- ಸೇವಂತಿಗೆ: ಕೆಜಿಗೆ ₹500–₹800
- ಗುಲಾಬಿ: ಕೆಜಿಗೆ ₹400
- ಕಣಗಲೆ ಹೂವು: ಕೆಜಿಗೆ ₹250
- ತಾವರೆ ಹೂವು: ಒಂದು ಜೋಡಿಗೆ ₹100
- ಬಾಳೆಕಂದು: ಒಂದು ಜೊತೆ ₹100
- ಸುಗಂಧರಾಜ ಹಾರ: ₹1,500–₹2,000
- ಹಣ್ಣುಗಳ ಬೆಲೆಯಲ್ಲೂ ಏರಿಕೆ:
ಹೂವುಗಳ ಜತೆಗೆ ಹಣ್ಣುಗಳ ಬೆಲೆಯಲ್ಲೂ ಕೊಂಚ ಏರಿಕೆಯಾಗಿದೆ. ಸೇಬಿನ ಬೆಲೆ ಕೆಜಿಗೆ ₹200ರಿಂದ ₹250ಕ್ಕೆ ತಲುಪಿದೆ. ಉಳಿದ ಹಣ್ಣುಗಳ ಬೆಲೆಯಲ್ಲೂ ಕೆಜಿಗೆ ಸುಮಾರು ₹10ರಿಂದ ₹20ರವರೆಗೆ ಹೆಚ್ಚಳವಾಗಿದೆ.
ವರಮಹಾಲಕ್ಷ್ಮೀ ಹಬ್ಬದ ಪೂಜೆ ಹಾಗೂ ಅಲಂಕಾರಕ್ಕೆ ಹೂವು, ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ. ಬೆಲೆ ಹೆಚ್ಚಿದ್ದರೂ ಹಬ್ಬದ ಸಂಭ್ರಮಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬರುತ್ತಿದ್ದಾರೆ. ಕೆ.ಆರ್. ಮಾರ್ಕೆಟ್ ಸುತ್ತಮುತ್ತ ಜನದಟ್ಟಣೆ ಹೆಚ್ಚಾಗಿರುವುದರಿಂದ ವಾಹನ ಸಂಚಾರಕ್ಕೂ ತೊಂದರೆ ಉಂಟಾಗಿದೆ.



