ಬೆಂಗಳೂರು: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಏಕಾಏಕಿ ಲೈಟ್ ಕಂಬ ಬಿದ್ದು, ನೇಪಾಳ ಮೂಲದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿ ಸಂಜಯನಗರದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಮೆರವಣಿಗೆ ನಡೆಯುತ್ತಿತ್ತು. ಇದೇ ವೇಳೆ ರಸ್ತೆಯಲ್ಲಿ ಆರ್ಕೆಸ್ಟ್ರಾ ಕೂಡ ಆಯೋಜಿಸಲಾಗಿತ್ತು. ರಾತ್ರಿ ಸುಮಾರು 11 ಗಂಟೆ ವೇಳೆಗೆ ಮೆರವಣಿಗೆಯನ್ನು ವೀಕ್ಷಿಸಲು ಜನರು ರಸ್ತೆ ಬದಿಯಲ್ಲಿ ನಿಂತಿದ್ದರು.
ಈ ಸಂದರ್ಭದಲ್ಲಿ ಏಕಾಏಕಿ ಹಳೆಯದಾಗಿದ್ದ ಲೈಟ್ ಕಂಬವೊಂದು ಜನರ ಮೇಲೆ ಬಿದ್ದಿದೆ. ಘಟನೆಯಲ್ಲಿ ನೇಪಾಳ ಮೂಲದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳೀಯರ ಪ್ರಕಾರ, ಬಿದ್ದಿರುವ ಲೈಟ್ ಕಂಬ ಹಳೆಯದಾಗಿದ್ದು, ಅದಕ್ಕೆ ವಿದ್ಯುತ್ ಸಂಪರ್ಕವೂ ಇರಲಿಲ್ಲ ಎನ್ನಲಾಗಿದೆ. ಕಂಬವನ್ನು ತೆರವುಗೊಳಿಸುವಂತೆ ಜಿಬಿಎ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.
ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಅವರ ಗುರುತು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.



