ನವದೆಹಲಿ: ಅಮೆರಿಕ ಡಾಲರ್ ದುರ್ಬಲತೆ, ಅಮೆರಿಕದ ಬಡ್ಡಿದರಗಳಲ್ಲಿನ ಬದಲಾವಣೆ ಹಾಗೂ ಸುರಕ್ಷಿತ ಹೂಡಿಕೆಯ ಹುಡುಕಾಟ ಸೇರಿದಂತೆ ಹಲವು ಕಾರಣಗಳಿಂದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್)ನಲ್ಲಿ ಫ್ಯೂಚರ್ ಚಿನ್ನ ಮತ್ತು ಬೆಳ್ಳಿ ದರ ಏರಿಕೆಯಾಗಿದೆ.
ಶುಕ್ರವಾರ ಮಧ್ಯಾಹ್ನ 3:10ರ ವೇಳೆಗೆ ಚಿನ್ನದ (Gold) ಫ್ಯೂಚರ್ಸ್ ಬೆಲೆ 10 ಗ್ರಾಂಗೆ ಸುಮಾರು 1,61,196 ರೂ.ಗೆ ತಲುಪಿತ್ತು. ಹಿಂದಿನ ಮುಕ್ತಾಯದ ಬೆಲೆಗೆ ಹೋಲಿಸಿದರೆ 1,771 ರೂ. ಅಥವಾ 1.11% ಏರಿಕೆ ದಾಖಲಾಗಿದೆ.
ಇದೇ ವೇಳೆ ಬೆಳ್ಳಿ (Silver) ಫ್ಯೂಚರ್ಸ್ ಕೂಡ ಏರಿಕೆ ಕಂಡಿದ್ದು, ಕೆಜಿಗೆ ಸುಮಾರು 2,46,371 ರೂ.ಗೆ ವಹಿವಾಟು ನಡೆದಿದೆ. ಹಿಂದಿನ ಬೆಲೆಗೆ ಹೋಲಿಸಿದರೆ 3,128 ರೂ. ಅಥವಾ 1.29% ಏರಿಕೆ ದಾಖಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಳೆದ 3 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ಸತತ ಮೂರನೇ ವಾರವೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಇದಕ್ಕೂ ಮೊದಲು ಇದೇ ವರ್ಷದ ಜನವರಿಯಲ್ಲಿ ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು 1.80 ಲಕ್ಷ ರೂ. ದಾಖಲೆ ಮಟ್ಟಕ್ಕೆ ತಲುಪಿತ್ತು. ಬೆಳ್ಳಿ ಬೆಲೆಯೂ ಪ್ರತಿ ಕೆ.ಜಿಗೆ ಸುಮಾರು 4.25 ಲಕ್ಷ ರೂ. ಗರಿಷ್ಠ ಮಟ್ಟ ಕಂಡಿತ್ತು.

