ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹುಬ್ಬಳ್ಳಿ ರಸ್ತೆಯ ಪಕ್ಕದಲ್ಲಿರುವ ಮಲ್ಲಾಡದ ಕಾಲೋನಿ, ಅಗ್ನಿ ಸೋಮೇಶ್ವರ ನಗರ ಹಾಗೂ ಯಲಿಗಾರ ಬಡಾವಣೆಯ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಮಳೆ ಬಂದರೆ ರಸ್ತೆಯೋ ಕೆಸರಿನ ಹೊಂಡವೋ ಎಂಬಂತಾಗುತ್ತಿದೆ. ರಸ್ತೆ ದುರಸ್ತಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಬಡಾವಣೆಯ ನಿವಾಸಿಗಳು ಗುರುವಾರ ಪುರಸಭೆಗೆ ತೆರಳಿ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ೮-೧೦ ವರ್ಷಗಳಿಂದ ಬಡಾವಣೆಯಲ್ಲಿ ವಾಸಿಸುತ್ತಿರುವ ನಿವಾಸಿಗಳು ಮನೆ ಹಾಗೂ ನೀರಿನ ಕರವನ್ನು ನಿಯಮಿತವಾಗಿ ಪಾವತಿಸುತ್ತಿದ್ದರೂ, ಬಡಾವಣೆಗೆ ಮಾತ್ರ ಸಮರ್ಪಕ ರಸ್ತೆ ಸೌಲಭ್ಯ ಕಲ್ಪಿಸಿಲ್ಲ ಎಂದು ನಿವೃತ್ತ ಶಿಕ್ಷಕ ಅರುಣಾಚಲ ಮಠದ ಹಾಗೂ ಯುವ ಮುಖಂಡ ಭೂಪಾಲ ಘೋಂಗಡಿ ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯ ಹಾಗೂ ಉಪರಸ್ತೆಗಳು ಸಂಪೂರ್ಣ ಹಾಳಾಗಿದ್ದು, ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಂತು ಕೆಸರು ತುಂಬಿಕೊಳ್ಳುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಪ್ರತಿದಿನ ಸಂಚರಿಸುತ್ತಿದ್ದು, ಕೆಲವರು ಕೆಸರಿನಲ್ಲಿ ಬಿದ್ದು ಶಾಲೆಗೆ ಹೋಗಲಾಗದೆ ಮನೆಗೆ ಮರಳಿದ ಉದಾಹರಣೆಗಳಿವೆ ಎಂದು ನಿವಾಸಿಗಳು ದೂರಿದರು.
ರಸ್ತೆ ಹದಗೆಟ್ಟಿರುವುದರಿಂದ ಕಸ ಸಾಗಿಸುವ ವಾಹನ, ಆಟೊ, ಶಾಲಾ ವಾಹನ ಸೇರಿದಂತೆ ಹಲವು ವಾಹನಗಳು ಮನೆಗಳವರೆಗೆ ಬರುತ್ತಿಲ್ಲ. ಇದರಿಂದ ವೃದ್ಧರು, ಮಕ್ಕಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಬಡಾವಣೆಯ ಚರಂಡಿಗಳ ಸ್ವಚ್ಛತಾ ಕಾರ್ಯವೂ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದರು.
ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಮಾತನಾಡಿ, ಪಟ್ಟಣದ ಅನೇಕ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ. ಮುಖ್ಯಮಂತ್ರಿಗಳ ವಿಶೇಷ ನಿಧಿಯಲ್ಲಿ ಎಲ್ಲ ಬಡಾವಣೆಗಳ ಅಭಿವೃದ್ಧಿ ಕಾಮಗಾರಿಗಳ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಆದಷ್ಟು ಶೀಘ್ರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಎ. ಬಣಗಾರ, ಜೆ.ಪಿ. ಕಡೆಮನಿ, ಡಿ.ಪಿ. ನದಾಫ, ಶ್ರೀಕಾಂತ ಕದಡಿ, ಜೆ.ಪಿ. ಕರಮಡಿ, ಎಚ್.ವೈ. ಹಂಜಗಿ, ಬಸವರಾಜ ಬೆಲಹುಣಸಿ, ನೀಲಕಂಠಪ್ಪ ದ್ಯಾಮಣಸಿ, ವಿಜಯ ಹಿರೇಮಠ, ಶ್ರೀಪಾಲ ಘೋಂಗಡಿ, ತಮ್ಮನಗೌಡ ಪಾಟೀಲ, ಟಿಪ್ಪೂಸಾಬ್ ನದಾಫ, ಆಕಾಶ ದೇಶಪಾಂಡೆ, ನಾಗರತ್ನ ಮಠದ, ಹೇಮಾ ಕದಡಿ, ಮಂಜುಳಾ ಘೋಂಗಡಿ ಸೇರಿದಂತೆ ಹಲವರು ಇದ್ದರು.
ಮನವಿ ಕೊಟ್ಟರೂ ಕ್ರಮವಿಲ್ಲ; ೩೦ ದಿನದ ಗಡುವು
ರಸ್ತೆ ಮತ್ತು ಚರಂಡಿ ಸಮಸ್ಯೆ ಕುರಿತು ಈಗಾಗಲೇ ಹಲವು ಬಾರಿ ಲಿಖಿತವಾಗಿ ಮನವಿ ಸಲ್ಲಿಸಿದ್ದೇವೆ. ಆದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ ೩೦ ದಿನಗಳೊಳಗೆ ಸಮಸ್ಯೆ ಪರಿಹರಿಸದಿದ್ದರೆ ನಿವಾಸಿಗಳೆಲ್ಲರೂ ಸೇರಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.



