ಗದಗ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗಂಭೀರ ಆರೋಪಗಳ ಬಾಂಬ್ ಸಿಡಿಸಿದ್ದಾರೆ. ಸಚಿವರಿಗೆ ಲಂಚ ನೀಡುವ ವಿಚಾರದಲ್ಲಿ ಮೊಬೈಲ್ ಹೊರಗಿಟ್ಟು, ಬಾಗಿಲು ಹಾಕಿಕೊಂಡು ಭ್ರಷ್ಟಾಚಾರ ಮಾಡುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ಆರೋಪಿಸಿರುವ ಅವರು, ಇಂತಹ ‘ಸ್ಟಿಂಗ್ ಆಪರೇಷನ್’ಗಳ ಚರಿತ್ರೆ ಕಾಂಗ್ರೆಸ್‌ನವರಿಗೆ ಚೆನ್ನಾಗಿ ಗೊತ್ತಿದೆ ಎಂದು ಟೀಕಿಸಿದ್ದಾರೆ.
ಸ್ಟಿಂಗ್ ಆಪರೇಷನ್‌ನ ಚರಿತ್ರೆ ಯಾರದ್ದು ಎನ್ನುವುದು ರಾಜ್ಯದ ಜನರಿಗೆ ಹಾಗೂ ಕಾಂಗ್ರೆಸ್ ಶಾಸಕರಿಗೆ ಗೊತ್ತಿದೆ. ಆಡಳಿತ ಪಕ್ಷದ ಶಾಸಕ ಎಚ್.ಕೆ. ಪಾಟೀಲರನ್ನೇ ಕೇಳಿದರೆ ಅವರೇ ಹೇಳುತ್ತಾರೆ ಎಂದು ವಿಜಯೇಂದ್ರ ಹೇಳಿದರು.
ಇದೇ ವೇಳೆ ಸರ್ಕಾರದ ಪ್ರಭಾವಿ ನಾಯಕನೊಬ್ಬ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಕರೆಸಿಕೊಂಡು, ಮೊಬೈಲ್ ಸ್ವಿಚ್ ಆಫ್ ಮಾಡಿಸಿ ಒಳಗೆ ಕೂರಿಸಿಕೊಂಡು ಹಣದ ಡೀಲ್‌ಗೆ ಒತ್ತಾಯಿಸಿದ್ದಾರೆ ಎಂಬ ಮತ್ತೊಂದು ಗಂಭೀರ ಆರೋಪವನ್ನು ವಿಜಯೇಂದ್ರ ಮಾಡಿದ್ದಾರೆ.
ಇಷ್ಟು ದಿನ ₹75 ಕೊಡುತ್ತಿದ್ದೀರಿ. ಇನ್ನು ಮುಂದೆ ₹150 ಕೊಡುವಂತೆ ಪ್ರಭಾವಿ ನಾಯಕರು ಉದ್ಯಮಿಗೆ ಕೇಳಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು. ಇದಕ್ಕೆ ಉದ್ಯಮಿ ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗ, ಹಾಗಾದರೆ ರಾಜ್ಯ ಬಿಟ್ಟು ಹೋಗಿ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದರು.
ಈ ಆರೋಪಗಳ ಬಗ್ಗೆ ಮುಖ್ಯಮಂತ್ರಿ ಸತ್ಯವನ್ನು ಬಹಿರಂಗಪಡಿಸಬೇಕು. ಇಂತಹ ಡೀಲ್ ನಡೆಸಿದವರು ಯಾರು ಎಂಬುದನ್ನು ಸಿಎಂ ರಾಜ್ಯದ ಜನರಿಗೆ ತಿಳಿಸಬೇಕು. ಇದರಿಂದ ರಾಜ್ಯದ ಜನರಿಗೆ ಹಾಗೂ ಉದ್ಯಮಿಗಳಿಗೆ ವಾಸ್ತವಾಂಶ ತಿಳಿಯಲಿದೆ ಎಂದು ವಿಜಯೇಂದ್ರ ಒತ್ತಾಯಿಸಿದರು.
ಏಜೆನ್ಸಿಗಳನ್ನು ಸಾಕಿಕೊಂಡಿರುವವರು ಯಾರು ಎನ್ನುವುದನ್ನು ಮುಖ್ಯಮಂತ್ರಿಗಳೇ ಹೇಳಬೇಕು. ಸರ್ಕಾರದ ಪ್ರಭಾವಿ ನಾಯಕನಿಂದ ನಡೆದಿರುವ ಡೀಲ್ ಬಗ್ಗೆ ಸಿಎಂ ಮೊದಲು ಬಾಯಿಬಿಡಲಿ ಎಂದು ಬಿ.ವೈ. ವಿಜಯೇಂದ್ರ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಸಿ. ಪಾಟೀಲ, ಮುಖಂಡರಾದ ಅನಿಲ ಮೆಣಸಿನಕಾಯಿ, ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



