ನವದೆಹಲಿ: ಅಂಗಡಿಗಳಲ್ಲಿ ಸಿಗುವ ಪ್ಯಾಕೆಟ್ ಆಹಾರ ಪದಾರ್ಥಗಳನ್ನು ಖರೀದಿಸುವಾಗ ಅದರಲ್ಲಿರುವ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಪ್ರಮಾಣ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳುವುದು ಇನ್ಮುಂದೆ ಸುಲಭವಾಗಬಹುದು.
ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಆಹಾರ ಪೊಟ್ಟಣಗಳ ಮುಂಭಾಗದಲ್ಲೇ ಪೌಷ್ಟಿಕಾಂಶದ ಎಚ್ಚರಿಕೆ ಲೇಬಲ್‌ಗಳನ್ನು ಅಳವಡಿಸುವಂತೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠ ಈ ನಿರ್ದೇಶನ ನೀಡಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಹೊಸ ಎಚ್ಚರಿಕೆ ಲೇಬಲ್ ವ್ಯವಸ್ಥೆ ರೂಪಿಸುವಾಗ ನ್ಯಾಯಾಲಯ ಸೂಚಿಸಿರುವ ಅಂಶಗಳನ್ನು ಕಡ್ಡಾಯವಾಗಿ ಪರಿಗಣಿಸಬೇಕು ಎಂದು ತಿಳಿಸಿದೆ.
ಪ್ಯಾಕೆಟ್ ಮುಂಭಾಗದಲ್ಲೇ ಕೆಂಪು ಎಚ್ಚರಿಕೆ!
ಸದ್ಯ ಆಹಾರ ಪೊಟ್ಟಣಗಳ ಹಿಂಭಾಗದಲ್ಲಿ ಪೌಷ್ಟಿಕಾಂಶಗಳ ವಿವರಗಳನ್ನು ಮುದ್ರಿಸಲಾಗುತ್ತದೆ. ಆದರೆ, ಸಣ್ಣ ಅಕ್ಷರಗಳಲ್ಲಿರುವ ಈ ಮಾಹಿತಿಯನ್ನು ಸಾಮಾನ್ಯ ಗ್ರಾಹಕರು ಸುಲಭವಾಗಿ ಓದುವುದು ಕಷ್ಟ. ಹೀಗಾಗಿ ಉತ್ಪನ್ನವನ್ನು ಖರೀದಿಸುವ ಮೊದಲೇ ಅದರಲ್ಲಿರುವ ಅಪಾಯಕಾರಿ ಪ್ರಮಾಣದ ಪೌಷ್ಟಿಕಾಂಶಗಳ ಬಗ್ಗೆ ತಿಳಿಯುವಂತಾಗಬೇಕು ಎಂಬ ಉದ್ದೇಶದಿಂದ ನ್ಯಾಯಾಲಯ ಈ ಕ್ರಮಕ್ಕೆ ಒತ್ತು ನೀಡಿದೆ.
ಹೊಸ ಲೇಬಲ್ ವ್ಯವಸ್ಥೆಯಲ್ಲಿ ಸಕ್ಕರೆ, ಉಪ್ಪು ಮತ್ತು ಕೊಬ್ಬಿಗೆ ಪ್ರತ್ಯೇಕ ಕೆಂಪು ಬಣ್ಣದ ಎಚ್ಚರಿಕೆ ಚಿಹ್ನೆಗಳನ್ನು ಬಳಸಬೇಕು. ಒಂದೇ ಚಿಹ್ನೆಯಲ್ಲಿ ಎಲ್ಲವನ್ನೂ ತೋರಿಸುವ ಬದಲು, ಪ್ರತಿಯೊಂದು ಅಂಶಕ್ಕೂ ಪ್ರತ್ಯೇಕ ಗುರುತು ಇರಬೇಕು. ಅದರೊಂದಿಗೆ ‘ಹೈ ಶುಗರ್’, ‘ಹೈ ಸಾಲ್ಟ್’ ಮತ್ತು ‘ಹೈ ಫ್ಯಾಟ್’ ಎಂಬ ಪದಗಳನ್ನೂ ಸ್ಪಷ್ಟವಾಗಿ ನಮೂದಿಸಬೇಕು ಎಂದು ಸೂಚಿಸಿದೆ.
ಲೇಬಲ್ ಗಾತ್ರಕ್ಕೂ ಸುಪ್ರೀಂ ಕೋರ್ಟ್ ಸೂಚನೆ:
ಎಚ್ಚರಿಕೆ ಚಿಹ್ನೆಗಳು ಕೇವಲ ಹೆಸರಿಗೆ ಮಾತ್ರ ಇರಬಾರದು. ಗ್ರಾಹಕರ ಕಣ್ಣಿಗೆ ಸುಲಭವಾಗಿ ಕಾಣುವಷ್ಟು ದೊಡ್ಡದಾಗಿರಬೇಕು ಎಂದು ನ್ಯಾಯಾಲಯ ಹೇಳಿದೆ. ಆಹಾರ ಪೊಟ್ಟಣದ ಮುಂಭಾಗದ ಪ್ರಮುಖ ಪ್ರದರ್ಶನ ಭಾಗದಲ್ಲಿ ಪ್ರತಿ ಚಿಹ್ನೆಯು ಕನಿಷ್ಠ ಶೇ.4ರಿಂದ ಶೇ.5ರಷ್ಟು ಜಾಗವನ್ನು ಆವರಿಸುವಂತೆ ವ್ಯವಸ್ಥೆ ರೂಪಿಸಬೇಕು. ವಿಶೇಷ ಕಾರಣಗಳಿದ್ದರೆ ಮಾತ್ರ ಇದಕ್ಕೆ ವಿನಾಯಿತಿ ನೀಡಬಹುದು ಎಂದು ತಿಳಿಸಿದೆ.
ಸಕ್ಕರೆ ಮತ್ತು ಕೊಬ್ಬಿನ ಲೆಕ್ಕಾಚಾರ ಬದಲಾವಣೆ?
ಎಚ್ಚರಿಕೆ ನೀಡುವಾಗ ಹೆಚ್ಚುವರಿ ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣವನ್ನಷ್ಟೇ ಲೆಕ್ಕ ಹಾಕಬಾರದು. ಆಹಾರದಲ್ಲಿರುವ ಒಟ್ಟು ಸಕ್ಕರೆ ಹಾಗೂ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವನ್ನೂ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಇದಕ್ಕಾಗಿ ಎಫ್‌ಎಸ್‌ಎಸ್‌ಎಐ ಹೊಸ ಎಚ್ಚರಿಕೆ ಮಿತಿಗಳನ್ನು ವೈಜ್ಞಾನಿಕ ಆಧಾರದ ಮೇಲೆ ಮರುಪರಿಶೀಲಿಸಿ ರೂಪಿಸಬೇಕು. ಮಿತಿಗಳನ್ನು ತುಂಬಾ ಕಡಿಮೆ ಮಾಡಿದರೆ ಬಹುತೇಕ ಎಲ್ಲ ಉತ್ಪನ್ನಗಳ ಮೇಲೂ ಎಚ್ಚರಿಕೆ ಚಿಹ್ನೆ ಹಾಕಬೇಕಾಗುತ್ತದೆ. ಇದರಿಂದ ಗ್ರಾಹಕರು ಅವುಗಳನ್ನು ಗಂಭೀರವಾಗಿ ಪರಿಗಣಿಸದಿರುವ ಸಾಧ್ಯತೆಯಿದೆ. ಮತ್ತೊಂದೆಡೆ, ಮಿತಿಗಳನ್ನು ಹೆಚ್ಚಿಸಿದರೆ ಹೆಚ್ಚಿನ ಸಕ್ಕರೆ, ಉಪ್ಪು ಮತ್ತು ಕೊಬ್ಬು ಹೊಂದಿರುವ ಉತ್ಪನ್ನಗಳೂ ಎಚ್ಚರಿಕೆ ಇಲ್ಲದೆ ಮಾರಾಟವಾಗಬಹುದು. ಹೀಗಾಗಿ ಸೂಕ್ತ ಮಾನದಂಡ ರೂಪಿಸುವುದು ಅಗತ್ಯ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಶಾಲಾ ಮಕ್ಕಳಿಗೂ ಪೌಷ್ಟಿಕಾಂಶದ ಪಾಠ:
ಆಹಾರ ಉತ್ಪನ್ನಗಳ ಮೇಲೆ ಎಚ್ಚರಿಕೆ ಲೇಬಲ್ ಹಾಕುವುದಷ್ಟೇ ಸಾಕಾಗುವುದಿಲ್ಲ. ಮಕ್ಕಳಲ್ಲೂ ಪೌಷ್ಟಿಕಾಂಶದ ಅರಿವು ಬೆಳೆಸಬೇಕು ಎಂದು ನ್ಯಾಯಾಲಯ ಒತ್ತಿಹೇಳಿದೆ. ಶಾಲಾ ಪಠ್ಯಕ್ರಮದಲ್ಲಿ ಆರೋಗ್ಯಕರ ಆಹಾರ ಪದ್ಧತಿ ಮತ್ತು ಪೌಷ್ಟಿಕಾಂಶದ ಬಗ್ಗೆ ಪಾಠಗಳನ್ನು ಸೇರಿಸಬೇಕು. ಕಾರ್ಯಾಗಾರಗಳು ಹಾಗೂ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಉತ್ತಮ ಆಹಾರ ಆಯ್ಕೆಗಳ ಬಗ್ಗೆ ತಿಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಿನ್ನೆಲೆ:
‘3ಎಸ್ ಅಂಡ್ ಅವರ್ ಹೆಲ್ತ್ ಸೊಸೈಟಿ’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಈ ನಿರ್ದೇಶನಗಳು ಹೊರಬಿದ್ದಿವೆ. ಪ್ಯಾಕೆಟ್ ಆಹಾರಗಳಲ್ಲಿರುವ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಪ್ರಮಾಣವನ್ನು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸುವ ವ್ಯವಸ್ಥೆ ಜಾರಿಗೆ ತರಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.
ಈ ಹಿಂದೆ ಎಫ್‌ಎಸ್‌ಎಸ್‌ಎಐ ಎರಡು ಅಥವಾ ಅದಕ್ಕಿಂತ ಹೆಚ್ಚು ಪೌಷ್ಟಿಕಾಂಶಗಳ ಪ್ರಮಾಣ ನಿಗದಿತ ಮಿತಿಯನ್ನು ಮೀರಿದ ಉತ್ಪನ್ನಗಳಿಗೆ ಕೆಂಪು ಬಣ್ಣದ ಷಡ್ಭುಜಾಕೃತಿಯ ಚಿಹ್ನೆ ಅಳವಡಿಸುವ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಅದರಲ್ಲಿನ ಕೆಲವು ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಪ್ರತ್ಯೇಕ ಎಚ್ಚರಿಕೆ ಚಿಹ್ನೆಗಳನ್ನು ಒಳಗೊಂಡ ಹೆಚ್ಚು ಸ್ಪಷ್ಟವಾದ ವ್ಯವಸ್ಥೆ ರೂಪಿಸುವಂತೆ ನಿರ್ದೇಶಿಸಿದೆ.







