ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರವಾದಿ ಹಜರತ್ ಮಹಮ್ಮದ್ ಅವರ ಜನ್ಮದಿನದ ಸ್ಮರಣಾರ್ಥ ಆಚರಿಸುವ ಈದ್ ಮಿಲಾದ್-ಉನ್-ನಬಿ ಅಂಗವಾಗಿ ಪಟ್ಟಣದಲ್ಲಿ ಬುಧವಾರ ಸಾವಿರಾರು ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಅದ್ದೂರಿ ಧಾರ್ಮಿಕ ಮೆರವಣಿಗೆ ನಡೆಸಿದರು. ಧಾರ್ಮಿಕ ಗೀತೆ, ಘೋಷಣೆಗಳು ಹಾಗೂ ಬಣ್ಣಬಣ್ಣದ ಅಲಂಕಾರಗಳಿಂದ ಪಟ್ಟಣದ ಪ್ರಮುಖ ಬೀದಿಗಳು ಹಬ್ಬದ ಸಂಭ್ರಮದಲ್ಲಿ ಮಿಂದೆದ್ದವು.
ಅಂಜುಮನ್-ಎ-ಇಸ್ಲಾಂ ಕಮಿಟಿ, ದರ್ಗಾ ಕಮಿಟಿ ಹಾಗೂ ಮುಸ್ಲಿಂ ಸಮಾಜದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮೆರವಣಿಗೆ ಪಟ್ಟಣದ ಭಾವೈಕ್ಯತೆಯ ಪ್ರತೀಕವಾಗಿರುವ ದೂದಪೀರಾಂ ದರ್ಗಾದಿಂದ ಆರಂಭವಾಯಿತು. ಪ್ರವಾದಿಯ ಸಂದೇಶ ಸಾರುವ ಗೀತೆಗಳು ಹಾಗೂ ಧಾರ್ಮಿಕ ಘೋಷಣೆಗಳೊಂದಿಗೆ ಬಜಾರ ರಸ್ತೆ, ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು.
ಯುವಕರು, ಹಿರಿಯರು ಸೇರಿದಂತೆ ವಿವಿಧ ವಯೋಮಾನದ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶ ಸಾರಿದ ಮೆರವಣಿಗೆ ಪುನಃ ದೂದಪೀರಾಂ ದರ್ಗಾಕ್ಕೆ ಆಗಮಿಸಿ ಸಮಾಪ್ತಿಗೊಂಡಿತು.
ಮೆರವಣಿಗೆಗೆ ಚಾಲನೆ ನೀಡಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಪ್ರವಾದಿ ಮಹಮ್ಮದ್ ಅವರು ಜಾತಿ, ಮತ, ಪಂಥದ ಗಡಿಗಳನ್ನು ಮೀರಿ ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಿದ ಮಹಾನ್ ವ್ಯಕ್ತಿ. ಅವರು ಸಾರಿದ ಶಾಂತಿ, ದಯೆ, ಸಹಿಷ್ಣುತೆ ಹಾಗೂ ಸಹಬಾಳ್ವೆಯ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈದ್ ಮಿಲಾದ್ ಅಂಗವಾಗಿ ಪಟ್ಟಣದ ಮಸೀದಿಗಳು ಹಾಗೂ ಪ್ರಮುಖ ಸ್ಥಳಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಕುರಾನ್ ಪಠಣ, ಧಾರ್ಮಿಕ ಪ್ರವಚನ, ದಾನಧರ್ಮ ಹಾಗೂ ಸಿಹಿ-ಭಕ್ಷ್ಯ ವಿತರಣೆ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು ನಡೆದವು.
ಮೆರವಣಿಗೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕಲ್ಪಿಸಿತ್ತು. ಡಿವೈಎಸ್ಪಿ ಮುರ್ತುಜಾ ಖಾದ್ರಿ, ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್ಐ ನಾಗರಾಜ ಗಡಾದ, ಕ್ರೈಂ ವಿಭಾಗದ ಪಿಎಸ್ಐ ಟಿ.ಕೆ. ರಾಥೋಡ, ಪ್ರಭಾರಿ ಪಿಎಸ್ಐ ರಮಾಕಾಂತ ಗುಗ್ಗರಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ನಲ್ಲಿ ಕರ್ತವ್ಯ ನಿರ್ವಹಿಸಿದರು.
ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಎಂ. ಗದಗ, ದೂದನಾನಾ ದರ್ಗಾ ಸಮಿತಿ ಅಧ್ಯಕ್ಷ ಸುಲೇಮಾನ ಕಣಕೆ, ಪುರಸಭೆ ಮಾಜಿ ಉಪಾಧ್ಯಕ್ಷರಾದ ದಾದಾಪೀರ ಮುಚ್ಚಾಲೆ, ಪಿರ್ದೋಶ ಆಡೂರ, ಮಾಜಿ ಸದಸ್ಯರಾದ ಎಸ್.ಕೆ. ಹವಾಲ್ದಾರ, ಮುಸ್ತಾಕ್ಅಹ್ಮದ್ ಶಿರಹಟ್ಟಿ, ಸಿಕಂದರ ಕಣಕೆ, ವೀರಕನ್ನಡಿಗ ಟಿಪ್ಪು ಸೇನೆ ಅಧ್ಯಕ್ಷ ಜಾಕೀರಹುಸೇನ್ ಹವಾಲ್ದಾರ, ಅಂಜುಮನ್ ಕಮಿಟಿ ಉಪಾಧ್ಯಕ್ಷ ಅಬ್ದುಲ್ ಕರೀಂ ಸೂರಣಗಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರವಾದಿ ಮುಹಮ್ಮದ್ ಅವರ ಶಾಂತಿ, ದಯೆ, ಸಹಿಷ್ಣುತೆ ಹಾಗೂ ಸಹಬಾಳ್ವೆಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರ ಜನ್ಮದಿನದ ಆಚರಣೆಗೆ ನಿಜವಾದ ಗೌರವ.
— ಜಿ.ಎಸ್. ಗಡ್ಡದೇವರಮಠ, ಮಾಜಿ ಶಾಸಕ



