ವಿಜಯಸಾಕ್ಷಿ ಸುದ್ದಿ, ಗದಗ: ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ಅವರ ಜೀವನ ಮಾನವಕುಲಕ್ಕೆ ಆದರ್ಶವಾಗಿದೆ. ಅವರ ಸುನ್ನತ್ಗಳನ್ನು ಅನುಸರಿಸುವ ಜತೆಗೆ ಪವಿತ್ರ ಕುರಾನ್ನ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೌಲಾನಾ ಫಾರೂಖ್ ಸಾಹೇಬ್ ಹೇಳಿದರು.
ತಾಲೂಕಿನ ಕೋಟುಮಚಗಿ ಗ್ರಾಮದ ಹಜರತ್ ಜಿಂದಾಶಾವಲಿ ಶಾದಿಮಹಲ್ನಲ್ಲಿ ಅಂಜುಮನ್-ಏ-ಇಸ್ಲಾಂ ಕಮಿಟಿ ಹಾಗೂ ನೌಜವಾನ್ ಕಮಿಟಿ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ಜಯಂತ್ಯೋತ್ಸವದಲ್ಲಿ ಅವರು ಮಾತನಾಡಿದರು.
ಇಮಾನ್ ಎಂದರೆ ಅಲ್ಲಾಹನ ಮೇಲೆ ದೃಢವಾದ ವಿಶ್ವಾಸವಿಡುವುದರ ಜತೆಗೆ ಪವಿತ್ರ ಗ್ರಂಥಗಳು, ಪ್ರವಾದಿಗಳು ಹಾಗೂ ಧಾರ್ಮಿಕ ಬೋಧನೆಗಳ ಮೇಲೆ ನಂಬಿಕೆ ಹೊಂದುವುದಾಗಿದೆ. ಇಮಾನ್ ಮತ್ತು ಕಲ್ಮಾದ ಮಹತ್ವವನ್ನು ಅರಿತು ಜೀವನದುದ್ದಕ್ಕೂ ಪಾಲಿಸಬೇಕು ಎಂದರು.
ಸತ್ಯ, ಪ್ರಾಮಾಣಿಕತೆ, ಕರುಣೆ, ಸಹನೆ ಹಾಗೂ ಅಮಾನತ್ದಾರಿತನಕ್ಕೆ ಪ್ರವಾದಿಯವರು ವಿಶೇಷ ಮಹತ್ವ ನೀಡಿದ್ದರು. ಅವರನ್ನು ‘ಅಲ್-ಅಮೀನ್’ ಎಂದು ಕರೆಯಲಾಗುತ್ತಿತ್ತು. ಅವರ ಆದರ್ಶಗಳನ್ನು ಕೇವಲ ಸ್ಮರಿಸುವುದಲ್ಲದೆ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಹಾಜಿ ಅಬ್ದುಲ್ ಖಾದರ್ ಸನ್ನುಭಾಯಿ ಮಾತನಾಡಿ, ಇಸ್ಲಾಂ ಶಾಂತಿ, ಸೌಹಾರ್ದ ಹಾಗೂ ಮಾನವೀಯತೆಯನ್ನು ಸಾರುತ್ತದೆ. ಧರ್ಮದ ಹೆಸರಿನಲ್ಲಿ ದ್ವೇಷ ಹಾಗೂ ಅಶಾಂತಿಗೆ ಅವಕಾಶ ನೀಡದೆ ಎಲ್ಲ ಧರ್ಮಗಳ ಜನರು ಪರಸ್ಪರ ಗೌರವದಿಂದ ಬದುಕಬೇಕು ಎಂದರು.
ಮೌಲಾನಾ ಅಬುಬಕ್ಕರ್ ಮಾತನಾಡಿ, ಇಮಾನ್ ಮಾನವನಿಗೆ ದೊರೆತ ಅಮೂಲ್ಯ ಸಂಪತ್ತು. ದೊರೆತ ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಸತ್ಕಾರ್ಯಗಳಲ್ಲಿ ತೊಡಗಬೇಕು. ನಮಾಜ್ ಸೇರಿದಂತೆ ಧಾರ್ಮಿಕ ಕರ್ತವ್ಯಗಳನ್ನು ಶ್ರದ್ಧೆಯಿಂದ ಪಾಲಿಸಬೇಕು ಎಂದು ಕರೆ ನೀಡಿದರು.
ನಿವೃತ್ತ ಶಿಕ್ಷಕರಾದ ಜೆ.ಎಚ್. ಮುಲ್ಲಾ, ಕೆ.ಎಫ್. ಮೀರಾನಾಯ್ಕ, ಜೆ.ಜೆ. ಹಿರೇಹಾಳ, ಕನ್ನಡಪ್ರಭದ ಹಿರಿಯ ಉಪಸಂಪಾದಕ ಅಜೀಜ್ ಅಹ್ಮದ್ ಬಳಗಾನೂರ ಹಾಗೂ ಅಂಜುಮನ್-ಏ-ಇಸ್ಲಾಂ ಕಮಿಟಿ ಅಧ್ಯಕ್ಷ ಜೀವನಸಾಬ ಸರ್ಕಾವಸ್ ಅವರನ್ನು ಸನ್ಮಾನಿಸಲಾಯಿತು.
ಮಕ್ಕಳಿಂದ ಕುರಾನ್ ಪಠಣ, ಭಾಷಣ, ಕವ್ವಾಲಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೌಲಾನಾ ಇಮಾಮಹುಸೇನ ಸಾಹೇಬ್, ಮೌಲಾನಾ ಆರೀಫಸಾಬ ಹಾಳಕೇರಿ, ನೌಜವಾನ್ ಕಮಿಟಿ ಸದಸ್ಯರಾದ ರಶೀದ್ ಅಹ್ಮದ್ ಹಾಳಕೇರಿ, ಜೀವನಸಾಬ ಸರಕಾವಸ್, ಮಹ್ಮದ್ ರಫೀಕ ಕೊಚಲಾಪುರ, ಜೀವನಸಾಬ ಅತ್ತಾರ, ಮುನ್ನಾ ಮುಳಗುಂದ, ಜೀವನಸಾಬ ಬುಕ್ಕಿಟಗಾರ, ಅಶ್ಫಾಕ್ ಮುಲ್ಲಾ, ಜೀವನಸಾಬ ಹಾಳಕೇರಿ, ನಭಿಸಾಬ್ ಮೀರನಾಯ್ಕ, ಶಾಮೀದ ಮೀರನಾಯ್ಕ, ದಾದೇಸಾಬ್ ಮುಜಾವರ್, ರಜಾಕ್ ತಹಶೀಲ್ದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಹ್ಮದಗೌಸ್ ನಿರೂಪಿಸಿದರು.
ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಆದರ್ಶಗಳು ಸತ್ಯ, ಕರುಣೆ, ಸಹನೆ ಹಾಗೂ ಮಾನವೀಯತೆಯ ಬದುಕಿಗೆ ದಾರಿದೀಪ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಗೌರವ.
— ಮೌಲಾನಾ ಫಾರೂಖ್ ಸಾಹೇಬ್



