HomeAgricultureಈರುಳ್ಳಿ ಬೆಲೆ ನಿಯಂತ್ರಣಕ್ಕೆ ರೈತರ ವಿರೋಧ

ಈರುಳ್ಳಿ ಬೆಲೆ ನಿಯಂತ್ರಣಕ್ಕೆ ರೈತರ ವಿರೋಧ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಈರುಳ್ಳಿ ಬೆಲೆ ಏರಿಕೆಯಾಗುವ ಮುನ್ನವೇ ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಗ್ರಾಹಕರ ಹಿತದೃಷ್ಟಿಯಿಂದ ಸರಿಯಾದ ಕ್ರಮವಾದರೂ, ಹಲವು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ, ರೋಗಬಾಧೆ ಹಾಗೂ ಬೆಲೆ ಕುಸಿತದಿಂದ ನಷ್ಟ ಅನುಭವಿಸುತ್ತಿರುವ ಈರುಳ್ಳಿ ಬೆಳೆಗಾರರ ಹಿತವನ್ನೂ ಸರ್ಕಾರ ಗಮನಿಸಬೇಕು ಎಂದು ಪ್ರಗತಿಪರ ರೈತ ಸೋಮನಗೌಡ ಪಾಟೀಲ ಆಗ್ರಹಿಸಿದ್ದಾರೆ.

ನಾಸಿಕ್‌ನಿಂದ ರೈಲುಗಳ ಮೂಲಕ ದೇಶದ ಪ್ರಮುಖ ನಗರಗಳಿಗೆ 800 ಮೆಟ್ರಿಕ್ ಟನ್ ಈರುಳ್ಳಿ ಪೂರೈಸಿ, ಬಫರ್ ದಾಸ್ತಾನಿನ ಈರುಳ್ಳಿಯನ್ನು ಕೆ.ಜಿ.ಗೆ ₹35ರಂತೆ ಏಜೆನ್ಸಿಗಳ ಮೂಲಕ ಮಾರಾಟ ಮಾಡಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮ ರೈತರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ವರ್ಷ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಬೆಳೆ ಸಮೀಕ್ಷೆ ಹಾಗೂ ಬರ ಘೋಷಣೆಯಲ್ಲೂ ವಿಳಂಬವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಹರಸಾಹಸಪಟ್ಟು ಉಳಿಸಿಕೊಂಡಿರುವ ಬೆಳೆಗೆ ಯೋಗ್ಯ ಬೆಲೆ ದೊರೆಯುವಂತೆ ಮಾಡುವುದು ಸರ್ಕಾರದ ಆದ್ಯತೆಯಾಗಬೇಕು. ಬೆಲೆ ನಿಯಂತ್ರಣದ ಕ್ರಮಗಳಿಂದ ರೈತರಿಗೆ ದೊರೆಯುತ್ತಿರುವ ಅಲ್ಪ ಆದಾಯಕ್ಕೂ ಧಕ್ಕೆ ತರಬಾರದು ಎಂದು ಒತ್ತಾಯಿಸಿದ್ದಾರೆ.

ಬೆಲೆ ಏರಿಕೆಯಾದಾಗ ಗ್ರಾಹಕರ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳುವ ಸರ್ಕಾರ, ಬೆಲೆ ಕುಸಿದಾಗ ರೈತರ ನೆರವಿಗೂ ಇದೇ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು. ಹಲವು ವರ್ಷಗಳ ನಷ್ಟದ ಬಳಿಕ ಈ ಬಾರಿ ದೊರೆಯುತ್ತಿರುವ ಉತ್ತಮ ಬೆಲೆ ರೈತರಿಗೆ ಕೊಂಚ ನೆಮ್ಮದಿ ನೀಡಿದೆ. ಅದಕ್ಕೂ ಬೆಲೆ ನಿಯಂತ್ರಣದ ಹೆಸರಿನಲ್ಲಿ ಧಕ್ಕೆ ತರಬಾರದು ಎಂದು ಸೋಮನಗೌಡ ಪಾಟೀಲ ಹೇಳಿದ್ದಾರೆ.

ಈರುಳ್ಳಿ ಬೆಳೆಗಾರರಿಗೆ ಯೋಗ್ಯ ಬೆಲೆ, ಬೆಳೆ ವಿಮೆ, ಬೆಂಬಲ ಬೆಲೆ ಹಾಗೂ ವೈಜ್ಞಾನಿಕ ಸಂಗ್ರಹಣಾ ವ್ಯವಸ್ಥೆ ಕಲ್ಪಿಸಬೇಕು. ಮಳೆ ಕೊರತೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಸಂಸದರಾದ ಪ್ರಹ್ಲಾದ ಜೋಶಿ ಹಾಗೂ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ಗಮನ ಸೆಳೆದು ರೈತರ ಪರ ಧ್ವನಿ ಎತ್ತಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಈರುಳ್ಳಿ ದೊರೆಯುವುದರ ಜತೆಗೆ ಬೆಳೆಗಾರರಿಗೂ ನ್ಯಾಯಯುತ ಬೆಲೆ ಸಿಗುವಂತಹ ಸಮತೋಲನದ ನೀತಿಯನ್ನು ಸರ್ಕಾರ ರೂಪಿಸಬೇಕು ಎಂದು ಸೋಮನಗೌಡ ಪಾಟೀಲ ಒತ್ತಾಯಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img