HomeAgricultureಉಂಡೆ ಬೀಜಗಳ ಮೂಲಕ ಪ್ರಕೃತಿಯನ್ನು ಹಸಿರಾಗಿಸೋಣ

ಉಂಡೆ ಬೀಜಗಳ ಮೂಲಕ ಪ್ರಕೃತಿಯನ್ನು ಹಸಿರಾಗಿಸೋಣ

Spread the love

ಜೂನ್ ತಿಂಗಳು ಎಂದರೆ ಪ್ರಕೃತಿ ಪ್ರಿಯರ ಮನದಲ್ಲಿ ಹೊಸ ಉತ್ಸಾಹ ಮತ್ತು ನಿರೀಕ್ಷೆಯ ಸಂಭ್ರಮ. ಬೇಸಿಗೆಯ ಬಿಸಿಲಿಗೆ ಕಂಗೆಟ್ಟ ಭೂಮಿಗೆ ತಂಪೆರೆಯುವ ಮುಂಗಾರು ಮಳೆಯ ಆಗಮನ ಇದೇ ತಿಂಗಳಲ್ಲಿ ಆಗುತ್ತದೆ. ಕೃಷಿಕರು ನೇಗಿಲು ಹಿಡಿದು ಹೊಲಕ್ಕೆ ಇಳಿಯುವ ಸಮಯವೂ ಇದೇ. ಕರ್ನಾಟಕದಲ್ಲಿ ಮುಂಗಾರು ಮಳೆ ಎಂದರೆ ಕೇವಲ ಋತು ಬದಲಾವಣೆ ಅಲ್ಲ; ಅದು ಪ್ರಕೃತಿಯ ಪುನರ್ಜನ್ಮದ ಹಬ್ಬ.

ಮಳೆ ಹನಿಗಳ ಸ್ಪರ್ಶದಿಂದ ಒಣಗಿದ್ದ ಭೂಮಿ ಮತ್ತೆ ಚಿಗುರೊಡೆಯುತ್ತದೆ. ಮರಗಳು, ಗಿಡಗಳು, ಪ್ರಾಣಿ-ಪಕ್ಷಿಗಳು ಸೇರಿದಂತೆ ಸಮಸ್ತ ಜೀವಸಂಕುಲಕ್ಕೆ ಹೊಸ ಜೀವ ತುಂಬುತ್ತದೆ. ಇಂತಹ ಸಮಯದಲ್ಲಿ ಪ್ರಕೃತಿಗೆ ನಾವು ಮರಳಿ ನೀಡಬಹುದಾದ ಅತ್ಯುತ್ತಮ ಕೊಡುಗೆ ಎಂದರೆ ಹಸಿರು ಪರಿಸರ ನಿರ್ಮಾಣ.

ಪ್ರಕೃತಿ ನಮ್ಮ ಬದುಕಿನ ಆಧಾರ

ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ, ವಾಸಿಸುವ ಪರಿಸರ ಎಲ್ಲವೂ ಪ್ರಕೃತಿಯ ಕೊಡುಗೆ. ಮರಗಳು ನಮಗೆ ಆಮ್ಲಜನಕ ನೀಡುತ್ತವೆ. ಮಣ್ಣು, ನೀರು, ಕಾಡುಗಳು ಹಾಗೂ ಜೀವ ವೈವಿಧ್ಯತೆ ಭೂಮಿಯ ಸಮತೋಲನ ಕಾಪಾಡುತ್ತವೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ನಾಶ, ನಗರೀಕರಣ ಹಾಗೂ ಪರಿಸರ ಹಾನಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರಕೃತಿಯ ಅಸ್ತಿತ್ವವೇ ಸವಾಲಿನಲ್ಲಿದೆ.

ಪ್ರಕೃತಿಯನ್ನು ಉಳಿಸುವ ಹೊಣೆಗಾರಿಕೆ ಕೇವಲ ಸರ್ಕಾರದದ್ದಲ್ಲ. ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ. ಈ ನಿಟ್ಟಿನಲ್ಲಿ ಉಂಡೆ ಬೀಜಗಳ ಬಳಕೆ ಸರಳ ಹಾಗೂ ಪರಿಣಾಮಕಾರಿ ಮಾರ್ಗವಾಗಿದೆ.

ಏನಿದು ಉಂಡೆ ಬೀಜ?

ಉಂಡೆ ಬೀಜ ಅಥವಾ ‘ಸೀಡ್ ಬಾಲ್’ ಎಂದರೆ ಫಲವತ್ತಾದ ಮಣ್ಣು, ಸಾವಯವ ಗೊಬ್ಬರ ಹಾಗೂ ದೇಶಿ ಮರಗಳ ಬೀಜಗಳನ್ನು ಸೇರಿಸಿ ತಯಾರಿಸುವ ಮಣ್ಣಿನ ಉಂಡೆ. ಕಪ್ಪು ಮಣ್ಣು ಅಥವಾ ಕೆಮ್ಮಣ್ಣಿಗೆ ಕೊಟ್ಟಿಗೆ ಗೊಬ್ಬರ ಅಥವಾ ಸಾವಯವ ಗೊಬ್ಬರ ಬೆರೆಸಿ ಅದರೊಳಗೆ ಬೀಜವನ್ನು ಇಟ್ಟು ಸಣ್ಣ ಉಂಡೆಯಾಗಿ ತಯಾರಿಸಲಾಗುತ್ತದೆ. ನಂತರ ಅವುಗಳನ್ನು ನೆರಳಿನಲ್ಲಿ ಒಣಗಿಸಿ ಸಂಗ್ರಹಿಸಿಡಲಾಗುತ್ತದೆ.

ಮಳೆಗಾಲ ಆರಂಭವಾದಾಗ ಈ ಉಂಡೆಗಳನ್ನು ಖಾಲಿ ಜಾಗಗಳು, ಗುಡ್ಡಗಾಡು ಪ್ರದೇಶಗಳು, ಬಂಜರು ಭೂಮಿ ಅಥವಾ ರಸ್ತೆ ಬದಿಗಳಲ್ಲಿ ಎಸೆದರೆ ಸಾಕು. ಮಳೆಯ ನೀರು ಸಿಗುತ್ತಿದ್ದಂತೆ ಬೀಜ ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತದೆ.

ಸೀಡ್ ಬಾಲ್‌ಗಳ ವಿಶೇಷತೆ

ಸಾಮಾನ್ಯವಾಗಿ ಬೀಜಗಳನ್ನು ನೆಲದ ಮೇಲೆ ಬಿತ್ತಿದರೆ ಪಕ್ಷಿಗಳು, ಇರುವೆಗಳು ಅಥವಾ ಇತರೆ ಜೀವಿಗಳು ಅವುಗಳನ್ನು ತಿಂದುಬಿಡುವ ಸಾಧ್ಯತೆ ಹೆಚ್ಚು. ಆದರೆ ಮಣ್ಣಿನ ಕವಚದಲ್ಲಿರುವ ಉಂಡೆ ಬೀಜಗಳು ಸುರಕ್ಷಿತವಾಗಿರುತ್ತವೆ. ಮಳೆಯ ನೀರು ಹೀರಿಕೊಂಡ ನಂತರ ಮಣ್ಣಿನ ಉಂಡೆ ಮೃದುವಾಗಿ ಬೀಜ ಮೊಳಕೆಯೊಡೆಯಲು ಅನುಕೂಲವಾಗುತ್ತದೆ. ಜೊತೆಗೆ ಗೊಬ್ಬರದ ಪೋಷಕಾಂಶಗಳು ಗಿಡದ ಬೆಳವಣಿಗೆಗೆ ನೆರವಾಗುತ್ತವೆ.

ಹಸಿರು ಪರಿಸರಕ್ಕೆ ಉಂಡೆ ಬೀಜಗಳ ಕೊಡುಗೆ

ಇತ್ತೀಚಿನ ವರ್ಷಗಳಲ್ಲಿ ಅರಣ್ಯ ನಾಶ, ಕಾಡ್ಗಿಚ್ಚು ಮತ್ತು ನಗರೀಕರಣದಿಂದ ಹಸಿರು ಪ್ರದೇಶಗಳು ಕಡಿಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಉಂಡೆ ಬೀಜಗಳು ಪರಿಸರ ಪುನಶ್ಚೇತನಕ್ಕೆ ಸಹಕಾರಿಯಾಗುತ್ತವೆ.

ಆಲ, ಅರಳಿ, ಬೇವು, ನೇರಳೆ, ಹೊಂಗೆ ಸೇರಿದಂತೆ ದೇಶಿ ಜಾತಿಯ ಮರಗಳ ಬೀಜಗಳನ್ನು ಬಳಸುವುದರಿಂದ ಪರಿಸರಕ್ಕೆ ಹೆಚ್ಚಿನ ಪ್ರಯೋಜನ ದೊರೆಯುತ್ತದೆ. ಇವುಗಳು ಆಮ್ಲಜನಕ ಉತ್ಪಾದನೆ, ಮಣ್ಣಿನ ಸಂರಕ್ಷಣೆ ಹಾಗೂ ಹಕ್ಕಿ-ಪಕ್ಷಿಗಳಿಗೆ ಆಶ್ರಯ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯಗಳ ಸವಾಲು ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ಉಂಡೆ ಬೀಜಗಳ ಬಳಕೆ ಅತ್ಯಂತ ಕಡಿಮೆ ವೆಚ್ಚದ ಹಾಗೂ ಪರಿಣಾಮಕಾರಿ ಪರಿಸರ ಸಂರಕ್ಷಣಾ ಕ್ರಮವಾಗಿದೆ.

ಮನೆಯಲ್ಲೇ ತಯಾರಿಸಬಹುದು

ರಜಾದಿನಗಳಲ್ಲಿ ಮಕ್ಕಳು ಮತ್ತು ಕುಟುಂಬ ಸದಸ್ಯರೊಂದಿಗೆ ಸೇರಿ ಉಂಡೆ ಬೀಜಗಳನ್ನು ತಯಾರಿಸಬಹುದು. ಇದು ಪರಿಸರ ಜಾಗೃತಿ ಮೂಡಿಸುವುದರ ಜೊತೆಗೆ ಮಕ್ಕಳಲ್ಲಿ ಪ್ರಕೃತಿ ಪ್ರೇಮ ಬೆಳೆಸಲು ಸಹಕಾರಿಯಾಗುತ್ತದೆ.

ಪ್ರವಾಸ ಅಥವಾ ಲಾಂಗ್ ಡ್ರೈವ್‌ಗೆ ತೆರಳುವಾಗ ಕೆಲವು ಉಂಡೆ ಬೀಜಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿ, ದಾರಿಯಲ್ಲಿ ಸಿಗುವ ಖಾಲಿ ಪ್ರದೇಶಗಳಲ್ಲಿ ಎಸೆಯುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬಹುದು.

ನಮ್ಮಿಂದ ಒಂದು ಹಸಿರು ಹೆಜ್ಜೆ

ಪ್ರಕೃತಿ ನಮಗೆ ಬದುಕಲು ಬೇಕಾದ ಎಲ್ಲವನ್ನೂ ನೀಡಿದೆ. ಅದಕ್ಕೆ ಪ್ರತಿಯಾಗಿ ನಾವು ನೀಡಬೇಕಾಗಿರುವುದು ಒಂದು ಸಣ್ಣ ಪ್ರಯತ್ನ ಮಾತ್ರ. ಈ ಮುಂಗಾರಿನಲ್ಲಿ ನಾವು ಬಿತ್ತುವ ಪ್ರತಿಯೊಂದು ಉಂಡೆ ಬೀಜವೂ ನಾಳಿನ ಹಸಿರು ಕರ್ನಾಟಕದ ಕನಸಿಗೆ ಅಡಿಗಲ್ಲಾಗಬಹುದು.

ಬನ್ನಿ, ಈ ಮಳೆಗಾಲದಲ್ಲಿ ಉಂಡೆ ಬೀಜಗಳನ್ನು ಬಿತ್ತೋಣ. ಪ್ರಕೃತಿಗೆ ಹಸಿರು ಸೀರೆಯುಡಿಸೋಣ. ಭೂಮಿಯನ್ನು ಉಳಿಸೋಣ.

ವೆಂಕಟೇಶ ಭಂಡಾರಿ
ತರಬೇತಿ ನಿರತರು, ರಾಜ್ಯ ಸಮಾಚಾರ ಕೇಂದ್ರ, ಹುಬ್ಬಳ್ಳಿ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!