ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಓಜೆಎಸ್ ಮೂವಿ ಮೇಕರ್ಸ್ ಅರ್ಪಿಸುವ ‘ಚಂದ್ರಿ’ ಕನ್ನಡ ಚಲನಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗಿವೆ.
ವಿಜಯನಗರ ಜಿಲ್ಲೆಯ ಕೊಟ್ಟೂರಿನ ಯುವ ಪ್ರತಿಭೆ ಎಸ್. ವೆಂಕಟೇಶ್ ಕೊಟ್ಟೂರು ನಿರ್ದೇಶಿಸುತ್ತಿರುವ ಎರಡನೇ ಚಿತ್ರ ಇದಾಗಿದ್ದು, ಡಾ. ಪ್ರವೀಣ್ ಚೌತಿ ಅವರ ‘ಬಯಲು’ ಕಥಾ ಸಂಕಲನದ ಕಥೆಯೊಂದನ್ನು ಆಧರಿಸಿ ಸಿನಿಮಾ ರೂಪಿಸಲಾಗಿದೆ. ಗ್ರಾಮೀಣ ಬದುಕಿನ ಸೂಕ್ಷ್ಮ ಭಾವನೆಗಳು, ಪ್ರೀತಿ, ಮೋಸ ಹಾಗೂ ಬದುಕಿಗಾಗಿ ನಡೆಯುವ ಹೋರಾಟವನ್ನು ಚಿತ್ರವು ತೆರೆದಿಡಲಿದೆ.
ಪ್ರಿಯಕರನ ಮೋಸಕ್ಕೆ ಬಲಿಯಾದ ಗ್ರಾಮೀಣ ಹೆಣ್ಣೊಬ್ಬಳು ಅಸಹಾಯಕಳಾಗಿ ಸಾವಿನ ಮನೆಯ ಕದ ತಟ್ಟುವ ಸಂದರ್ಭದಲ್ಲಿ ಸೈದಪ್ಪ ಆಕೆಗೆ ಹೊಸ ಬದುಕು ಕಟ್ಟಿಕೊಡುತ್ತಾನೆ. ಬದುಕಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ಎರಡು ಜೀವಗಳು ನಡೆಸುವ ಹೋರಾಟವೇ ಚಿತ್ರದ ಪ್ರಮುಖ ಕಥಾಹಂದರವಾಗಿದೆ.
ರಾಯಚೂರು ನಗರ, ಶಕ್ತಿನಗರ, ಕೊಟ್ಟೂರು, ಹೂವಿನಹಡಗಲಿ, ಮದಲಘಟ್ಟ ಹಾಗೂ ಮರಳವಾಡಿ ಸುತ್ತಮುತ್ತ 18 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಚಿತ್ರದ ಪ್ರಮುಖ ಪಾತ್ರವಾದ ಸೈದಪ್ಪನಾಗಿ ರಾಮರಾವ್.ಜಿ. ಅಭಿನಯಿಸಿದ್ದಾರೆ. ಅವರು ‘ಕೆಜಿಎಫ್’, ‘ಪೈಲ್ವಾನ್’, ‘ಐರಾವತ’, ‘ರುಸ್ತುಂ’, ‘ಜಗ್ಗು ದಾದ’, ‘ಬಘೀರ’, ‘ಭೈರತಿ ರಣಗಲ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಚಂದ್ರಿ ಪಾತ್ರದಲ್ಲಿ ವ್ಯೋಮಿ ಸಾಕೆಲ್ ಅಭಿನಯಿಸಿದ್ದಾರೆ.
ಪ್ರಗತಿ ಪ್ರಭು, ಚಕ್ರವರ್ತಿ ದಾವಣಗೆರೆ, ಶಿವಮೊಗ್ಗ ರಾಮಣ್ಣ, ಉಗ್ರಂ ಸುರೇಶ್, ಶಶಿಧರ್, ಡಾ. ಪ್ರವೀಣ್ ಚೌತಿ, ಎಸ್.ಕೆ. ಬಾಬು ಬೆಳಗೊಳ, ಸುರೇಶ್ ದೇವರಮನಿ, ಶಾರದಾ ಕಲ್ಲೂರ್, ಮಂಜೇಶ್ ಸೇರಿದಂತೆ ಕಲಾವಿದರು ತಾರಾಗಣದಲ್ಲಿದ್ದಾರೆ.
ಚಿತ್ರದ ಪ್ರಮುಖ ವಿಶೇಷತೆ ಎಂದರೆ ಸಿಂಕ್ ಸೌಂಡ್ನೊಂದಿಗೆ ಚಿತ್ರೀಕರಣ ನಡೆಸಿರುವುದು. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಅವುಗಳನ್ನು ನಿರ್ದೇಶಕ ಎಸ್. ವೆಂಕಟೇಶ್ ಕೊಟ್ಟೂರು ಅವರೇ ರಚಿಸಿದ್ದಾರೆ.
ಸುನಿಲ್ ಕೆ.ಆರ್.ಎಸ್. ಛಾಯಾಗ್ರಹಣ, ಮಹಾಂತೇಶ್ ನವಲಕಾರ್ ಸಂಭಾಷಣೆ, ಎಸ್.ಕೆ. ಸಹಿಶ್ಯಾಮ್ ಸಂಗೀತ, ಮುತ್ತುರಾಜ್ ಟಿ. ಸಂಕಲನ, ಮೋಹನ್–ಅಜಿತ್ ಯಳಿವಾಳ ಸಿಂಕ್ ಸೌಂಡ್, ರಾಜ ಭಾಸ್ಕರ್ 5.1 ಮಿಕ್ಸಿಂಗ್, ವರುಣ್ ಗೌಡ ಡಿ.ಐ., ಬಸವರಾಜ್ ಆಚಾರ್ ಕಲಾ ವಿಭಾಗದ ಜವಾಬ್ದಾರಿ ನಿರ್ವಹಿಸಿದ್ದಾರೆ.
ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ್ ಹಂಡಿಗಿ ಪಿಆರ್ಒಗಳಾಗಿ, ಎಚ್. ಶಶಿಧರ್–ಆರ್ಮುಗಂ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಚಿತ್ರಕಥೆ ಹಾಗೂ ನಿರ್ದೇಶನ ಎಸ್. ವೆಂಕಟೇಶ್ ಕೊಟ್ಟೂರು ಅವರದ್ದಾಗಿದೆ. ಶ್ರೀಮತಿ ಅನುಷಾ ಸುಪ್ರೀತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.



