ವಿಜಯಸಾಕ್ಷಿ ಸುದ್ದಿ, ಗದಗ: ಸಾರ್ವಜನಿಕರು ಸಲ್ಲಿಸುವ ಅಹವಾಲುಗಳನ್ನು ಸ್ವೀಕರಿಸಿ ಕಡತಕ್ಕೆ ಸೀಮಿತಗೊಳಿಸದೆ, ಸಮಸ್ಯೆ ಬಗೆಹರಿಯುವವರೆಗೆ ನಿರಂತರ ಅನುಸರಣೆ ನಡೆಸಿ ಪರಿಹಾರ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆದ ‘ಪ್ರಜಾ ಸೇವಾ ಅಭಿಯಾನ–ಜನ ಸಂಪರ್ಕ ಸಭೆ’ ಉದ್ಘಾಟಿಸಿ ಅವರು ಮಾತನಾಡಿದರು.
‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಹಾಗೂ ‘ಅಹವಾಲು ನಿಮ್ಮದು, ಪರಿಹಾರ ನಮ್ಮದು’ ಎಂಬ ಆಶಯದೊಂದಿಗೆ ನಡೆಯುತ್ತಿರುವ ಅಭಿಯಾನವು ಸರ್ಕಾರದ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಮಹತ್ವದ ಹೆಜ್ಜೆಯಾಗಿದೆ. ಸಾರ್ವಜನಿಕರು ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸುವುದು ಇದರ ಉದ್ದೇಶವಾಗಿದೆ ಎಂದರು.
ಪ್ರತಿ ಶನಿವಾರ ಅಹವಾಲುಗಳ ಪರಿಶೀಲನೆ
ಪ್ರತಿ ಮನೆಗೂ ಅಹವಾಲು ಸಲ್ಲಿಸಲು ಅರ್ಜಿ ನಮೂನೆಗಳನ್ನು ನೀಡಲಾಗಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸ್ಪಷ್ಟವಾಗಿ ನಮೂದಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಜನ ಸಂಪರ್ಕ ಸಭೆಯಲ್ಲಿ ಸ್ವೀಕರಿಸಿದ ಅಹವಾಲುಗಳ ಮೇಲೆ ಕೈಗೊಂಡ ಕ್ರಮಗಳ ಕುರಿತು ಪ್ರತಿ ಶನಿವಾರ ಪರಿಶೀಲನೆ ನಡೆಸಲಾಗುವುದು. ಸಮಸ್ಯೆ ಇತ್ಯರ್ಥವಾಗುವವರೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಅನುಸರಣೆ ಮಾಡಲಾಗುವುದು ಎಂದು ಶ್ರೀಧರ್ ತಿಳಿಸಿದರು.
ಸರ್ಕಾರದ ವಿವಿಧ ಯೋಜನೆಗಳು, ಸೌಲಭ್ಯಗಳು ಹಾಗೂ ಇಲಾಖೆಗಳ ಸೇವೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಯಾವುದೇ ಕಾರಣಕ್ಕೂ ಅರ್ಹರು ಸೌಲಭ್ಯಗಳಿಂದ ವಂಚಿತರಾಗಬಾರದು. ಸಾರ್ವಜನಿಕರು ಮಧ್ಯವರ್ತಿಗಳನ್ನು ಅವಲಂಬಿಸದೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾರ್ವಜನಿಕರು ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪೊಲೀಸ್, ಅರಣ್ಯ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯ ವೈಯಕ್ತಿಕ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟರು. ಕೆಲವು ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಯಿತು. ಸ್ಥಳ ಪರಿಶೀಲನೆ, ದಾಖಲೆ ಪರಿಶೀಲನೆ ಅಥವಾ ಇಲಾಖೆಯ ಅನುಮತಿ ಅಗತ್ಯವಿದ್ದ ಪ್ರಕರಣಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ವಹಿಸಿ, ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
ಜನರ ಸಮಸ್ಯೆಗಳನ್ನು ಕೇವಲ ಅರ್ಜಿಗಳಾಗಿ ಪರಿಗಣಿಸದೆ, ಅವುಗಳ ಹಿಂದಿರುವ ವಾಸ್ತವಿಕ ಪರಿಸ್ಥಿತಿಯನ್ನು ಅರಿತು ಪರಿಹಾರ ಕಲ್ಪಿಸುವುದೇ ಜನ ಸಂಪರ್ಕ ಸಭೆಯ ಉದ್ದೇಶವಾಗಿದೆ. ಈ ಮೂಲಕ ಆಡಳಿತ ಮತ್ತು ಸಾರ್ವಜನಿಕರ ನಡುವಿನ ನೇರ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಹಾಯಕ ಆಯುಕ್ತ ಗಂಗಪ್ಪ ಎಂ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್. ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶ ವಿವರಿಸಿದರು. ವೆಂಕಟೇಶ್ ಆಲ್ಕೋಡ ಮತ್ತು ತಂಡ ನಾಡಗೀತೆ ಪ್ರಸ್ತುತಪಡಿಸಿದರು.
ಅಧಿಕಾರಿಗಳಿಗೆ ಸ್ಪಷ್ಟ ಹೊಣೆಗಾರಿಕೆ
ಅಹವಾಲು ಸ್ವೀಕರಿಸಿದ ಬಳಿಕ ಅದನ್ನು ಯಾವ ಇಲಾಖೆಗೆ ವಹಿಸಲಾಗಿದೆ, ಕೈಗೊಂಡ ಕ್ರಮವೇನು ಹಾಗೂ ಸಮಸ್ಯೆ ಇತ್ಯರ್ಥವಾಗಿದೆಯೇ ಎಂಬುದರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಲಿದೆ. ಹೀಗಾಗಿ ಜನ ಸಂಪರ್ಕ ಸಭೆ ಕೇವಲ ಅಹವಾಲು ಸ್ವೀಕಾರ ಕಾರ್ಯಕ್ರಮವಾಗದೆ, ಪರಿಹಾರಕ್ಕೆ ಹೊಣೆಗಾರಿಕೆ ನಿಗದಿಪಡಿಸುವ ವೇದಿಕೆಯಾಗಿ ರೂಪುಗೊಳ್ಳಲಿದೆ.
ಸಾರ್ವಜನಿಕರಿಂದ ಸ್ವೀಕರಿಸುವ ಪ್ರತಿಯೊಂದು ಅರ್ಜಿಯೂ ಸಂಬಂಧಿಸಿದ ಇಲಾಖೆಯ ಗಮನಕ್ಕೆ ಹೋಗಬೇಕು. ಅರ್ಜಿ ಸ್ವೀಕರಿಸಿ ಅಲ್ಲಿಗೇ ಕೈಬಿಡುವ ವ್ಯವಸ್ಥೆ ಇದಲ್ಲ. ಸಮಸ್ಯೆ ಬಗೆಹರಿಯುವವರೆಗೆ ಅನುಸರಣೆ ನಡೆಸಲಾಗುವುದು. ಅರ್ಜಿಯ ಕುರಿತು ಕೈಗೊಂಡ ಕ್ರಮ ಹಾಗೂ ದೊರೆತ ಪರಿಹಾರದ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ.
— ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

