ವಿಜಯಸಾಕ್ಷಿ ಸುದ್ದಿ, ಡಂಬಳ: ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಡಂಬಳ–ಕಪ್ಪತ್ತಗುಡ್ಡದಲ್ಲಿ ಶ್ರೀ ಕಪ್ಪತ್ತಮಲ್ಲೇಶ್ವರ (ಕಪ್ಪತ್ತಮಲ್ಲಯ್ಯ) ಹಾಗೂ ಭ್ರಮರಾಂಬಾದೇವಿ ವಿವಾಹ ಮಹೋತ್ಸವ ಮತ್ತು ಜಾತ್ರಾ ರಥೋತ್ಸವ ಸೆ. 6 ಮತ್ತು 7ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದೆ.
ಕಪ್ಪತ್ತಗುಡ್ಡದ ಕಪ್ಪತ್ತಮಲ್ಲೇಶ್ವರ ದೇವಸ್ಥಾನದಲ್ಲಿ ಸೆ. 6ರಂದು ಕಪ್ಪತ್ತಮಲ್ಲೇಶ್ವರ ಹಾಗೂ ಭ್ರಮರಾಂಬಾದೇವಿಯ ವಿವಾಹ ಮಹೋತ್ಸವ ಕಪ್ಪತ್ತಮಲ್ಲೇಶ್ವರ ಟ್ರಸ್ಟ್ ಕಮಿಟಿ ವತಿಯಿಂದ ನೆರವೇರಲಿದೆ. ವಿವಾಹ ಮಹೋತ್ಸವದ ಅಂಗವಾಗಿ ದಾಸೋಹ ಸಮಿತಿಯಿಂದ ಕಪ್ಪತ್ತಗುಡ್ಡದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಇದರ ಮುಂದುವರಿದ ಭಾಗವಾಗಿ ಸೆ. 7ರಂದು ಡಂಬಳ ಗ್ರಾಮದಲ್ಲಿ ಜಾತ್ರಾ ರಥೋತ್ಸವ ಜರುಗಲಿದೆ. ಡಂಬಳದ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಹೊರಡುವ ರಥವು ಗ್ರಾಮದ ಪ್ರಮುಖ ಪೇಟೆಯ ಮೂಲಕ ಸಂಚರಿಸಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ತಲುಪಲಿದೆ.
ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳ ಹಾಗೂ ವಿವಿಧೆಡೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿವಾಹ ಮಹೋತ್ಸವ ಹಾಗೂ ರಥೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕಪ್ಪತ್ತಮಲ್ಲೇಶ್ವರ ಟ್ರಸ್ಟ್ ಕಮಿಟಿ ಹಾಗೂ ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ಕಪ್ಪತ್ತಮಲ್ಲೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಹೇಶ ಗಡಗಿ, ಉಪಾಧ್ಯಕ್ಷರಾದ ಮಹೇಶ ರಾಯರಡ್ಡಿ ಹಾಗೂ ತ್ರಿಯಾಂಬಕ ಎನ್. ಬಂಡಿಹಾಳ, ಕಾರ್ಯದರ್ಶಿ ಶರಣಬಸಪ್ಪ ಪ್ಯಾಟಿ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪ್ಯಾಟಿ, ಉಪಾಧ್ಯಕ್ಷ ಬಸುರಾಜ ಶಿರೋಳ, ಕಾರ್ಯದರ್ಶಿ ಶಶಿಕುಮಾರ ಸಣ್ಣಪ್ಯಾಟಿ, ಖಜಾಂಚಿ ಮಲ್ಲೇಶ ಚಿಕ್ಕರಡ್ಡಿ ಸೇರಿದಂತೆ ಉತ್ಸವ ಸಮಿತಿ, ದಾಸೋಹ ಸಮಿತಿ ಸದಸ್ಯರು ಹಾಗೂ ಭಕ್ತರು ಉತ್ಸವದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಕಪ್ಪತ್ತಮಲ್ಲೇಶ್ವರ–ಭ್ರಮರಾಂಬಾದೇವಿ ವಿವಾಹ ಮಹೋತ್ಸವ ಮತ್ತು ರಥೋತ್ಸವವು ಭಕ್ತಿಭಾವದಿಂದ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವದ ಸಡಗರ ಹೆಚ್ಚಿಸಬೇಕು.
— ಮಹೇಶ ಗಡಗಿ, ಅಧ್ಯಕ್ಷ, ಕಪ್ಪತ್ತಮಲ್ಲೇಶ್ವರ ಟ್ರಸ್ಟ್ ಕಮಿಟಿ



