ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನಗರದ ಡಾ. ಸಿಂಪಿ ಲಿಂಗಣ್ಣ ರಸ್ತೆಯ ಹಿಂದ್ ಕೇಸರಿ ಯುವಕ ಮಂಡಳಿಯಿಂದ ಪ್ರಥಮ ಬಾರಿಗೆ ಕವನ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದ ಕವಿಗಳಿಗೆ ಒಟ್ಟು ₹5 ಸಾವಿರ ನಗದು ಹಾಗೂ ಪುಸ್ತಕ ಬಹುಮಾನ ನೀಡಲಾಗುವುದು ಎಂದು ಮಂಡಳಿ ಅಧ್ಯಕ್ಷ ಬಸವರಾಜ ಕರುಗಲ್ ತಿಳಿಸಿದ್ದಾರೆ.
ಇದುವರೆಗೆ ಶ್ರೀ ಗಜಾನನ ಗೆಳೆಯರ ಬಳಗ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ ಬಳಗವು ಗಣೇಶೋತ್ಸವದ ಸಂದರ್ಭದಲ್ಲಿ ಕೊಪ್ಪಳದ ಕೋಟ್ಯಧಿಪತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಗಮನ ಸೆಳೆದಿತ್ತು. ಈ ವರ್ಷದಿಂದ ಹಿಂದ್ ಕೇಸರಿ ಯುವಕ ಮಂಡಳಿ ಎಂಬ ಹೊಸ ಹೆಸರಿನೊಂದಿಗೆ ವಿನೂತನವಾಗಿ ಕವನ ಸ್ಪರ್ಧೆ ಆಯೋಜಿಸುತ್ತಿದೆ.
ಗಣೇಶೋತ್ಸವದ ಅಂಗವಾಗಿ ಸೆ.22ರಂದು ಸಂಜೆ 6 ಗಂಟೆಗೆ ನಗರದ ಡಾ. ಸಿಂಪಿ ಲಿಂಗಣ್ಣ ರಸ್ತೆಯಲ್ಲಿರುವ ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಗೆ ಯಾವುದೇ ವಯಸ್ಸಿನ ನಿರ್ಬಂಧವಿಲ್ಲ. ಆಸಕ್ತರು ಮುಕ್ತವಾಗಿ ಭಾಗವಹಿಸಬಹುದಾಗಿದ್ದು, ಸ್ವರಚಿತ ಕವನಗಳನ್ನು ಮಾತ್ರ ವಾಚಿಸಬೇಕು. ಸ್ಪರ್ಧೆಯ ವಿಜೇತರ ಆಯ್ಕೆಯಲ್ಲಿ ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರಲಿದೆ.
ಹೆಸರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಬಸವರಾಜ ಕರುಗಲ್ (9380605892), ಅಮಿತ್ ಮಾಲಗಿತ್ತಿ (9035556637) ಹಾಗೂ ಆನಂದ್ ವಿಭೂತಿಮಠ (7411850242) ಅವರನ್ನು ಸಂಪರ್ಕಿಸಬಹುದು.



