ವಿಜಯಸಾಕ್ಷಿ ಸುದ್ದಿ, ನರಗುಂದ: ತಾಲೂಕಿನ ಬೆನಕನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕದಾಳ ಗ್ರಾಮದಲ್ಲಿ ವಿಬಿಜಿ-ರಾಮ್-ಜಿ ಯೋಜನೆಯಡಿ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾಮಗಾರಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಕಾಮಗಾರಿ ಸ್ಥಳದಲ್ಲಿದ್ದ ಕೂಲಿಕಾರ್ಮಿಕರೊಂದಿಗೆ ಸಂವಾದ ನಡೆಸಿದ ಅವರು, ಯೋಜನೆಯಡಿ ದೊರೆಯುವ ಸೌಲಭ್ಯಗಳು, ಕೂಲಿ ಪಾವತಿ ಹಾಗೂ ಹಾಜರಾತಿ ನಿಯಮಗಳ ಕುರಿತು ಮಾಹಿತಿ ನೀಡಿದರು. ಯೋಜನೆಯಡಿ ದಿನಕ್ಕೆ ₹382 ಕೂಲಿ ನಿಗದಿಯಾಗಿದ್ದು, ನಿಗದಿತ ಅಳತೆಗೆ ಅನುಗುಣವಾಗಿ ಕೆಲಸ ಮಾಡಿದರೆ ಪೂರ್ಣ ಕೂಲಿ ದೊರೆಯಲಿದೆ. ಕೆಲಸದ ಅಳತೆಯಲ್ಲಿ ವ್ಯತ್ಯಾಸವಾದರೆ ಅದಕ್ಕೆ ಅನುಗುಣವಾಗಿ ಕೂಲಿ ಮೊತ್ತದಲ್ಲೂ ವ್ಯತ್ಯಾಸವಾಗಲಿದೆ ಎಂದು ಸ್ಪಷ್ಟಪಡಿಸಿದರು.
ನಿರಂತರವಾಗಿ ಕೆಲಸ ಒದಗಿಸುವಂತೆ ಕಾರ್ಮಿಕರು ಮನವಿ ಮಾಡಿದರು. ಈ ವೇಳೆ ವೈಯಕ್ತಿಕವಾಗಿ ಇಒ ಅವರನ್ನು ಭೇಟಿಯಾದ ಕಾರ್ಮಿಕರು ನಮೂನೆ-6 ಸಲ್ಲಿಸಿದ ಬಳಿಕ 15 ದಿನಗಳಲ್ಲಿ ಕೆಲಸ ದೊರೆಯದಿದ್ದರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಒ, ಮೊದಲು ನಮೂನೆ-6 ಸಲ್ಲಿಸುವಂತೆ ಸೂಚಿಸಿ, 15 ದಿನಗಳೊಳಗೆ ಕೆಲಸ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸಿಬ್ಬಂದಿಯಿಂದ ಕೆಲಸ ನೀಡಲು ಸಾಧ್ಯವಾಗದಿದ್ದರೆ ಯೋಜನೆಯ ನಿಯಮದಂತೆ ನಿರುದ್ಯೋಗ ಭತ್ಯೆ ನೀಡುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಯೋಜನೆಯಡಿ ನಿರಂತರವಾಗಿ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮ ವಹಿಸಲಾಗುತ್ತಿದ್ದು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾಮಗಾರಿ ಸ್ಥಳದಲ್ಲಿ ದಿನದ ಎರಡೂ ಹಾಜರಾತಿಗಳಿಗೆ ಕಾರ್ಮಿಕರು ಕಡ್ಡಾಯವಾಗಿ ಹಾಜರಾಗಬೇಕು. ಒಂದು ಹಾಜರಾತಿಗೆ ಮಾತ್ರ ಹಾಜರಾಗಿ ಮತ್ತೊಂದಕ್ಕೆ ಗೈರಾದರೆ ಕೂಲಿ ಪಾವತಿಯಲ್ಲಿ ತೊಂದರೆಯಾಗಲಿದೆ. ಆದ್ದರಿಂದ ಎರಡೂ ಹಾಜರಾತಿಗಳನ್ನು ಕಡ್ಡಾಯವಾಗಿ ನೀಡುವಂತೆ ಸೂಚಿಸಿದರು.
ವಿಬಿಜಿ-ರಾಮ್-ಜಿ ಯೋಜನೆಯಡಿ ವರ್ಷಕ್ಕೆ 125 ದಿನಗಳವರೆಗೆ ಉದ್ಯೋಗ ಒದಗಿಸುವ ಅವಕಾಶವಿದ್ದು, ಅರ್ಹ ಕೂಲಿಕಾರ್ಮಿಕರಿಗೆ ವರ್ಷದಲ್ಲಿ 125 ದಿನಗಳವರೆಗೆ ಕೆಲಸ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀಧರ್ ಚಿನಗುಂಡಿ ತಿಳಿಸಿದರು.
ಈ ಸಂದರ್ಭದಲ್ಲಿ ಬೆನಕನಕೊಪ್ಪ ಗ್ರಾಪಂ ಪಿಡಿಒ ವಿ.ಆರ್. ರಾಯನಗೌಡರ, ವಿಬಿಜಿ-ರಾಮ್-ಜಿ ಸಿಬ್ಬಂದಿ ಹನುಮಂತ ಡಂಬಳ, ಲಿಂಗರಾಜ ಮುದಿಗೌಡರ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.
ಅಳತೆಗೆ ಅನುಗುಣವಾಗಿ ನಿಗದಿತ ಪ್ರಮಾಣದ ಕೆಲಸ ಮಾಡಿದರೆ ಕಾರ್ಮಿಕರಿಗೆ ಪೂರ್ಣ ಕೂಲಿ ದೊರೆಯಲಿದೆ. ನಮೂನೆ-6 ಸಲ್ಲಿಸಿದ 15 ದಿನಗಳೊಳಗೆ ಕೆಲಸ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸಾಧ್ಯವಾಗದಿದ್ದರೆ ನಿಯಮಾನುಸಾರ ನಿರುದ್ಯೋಗ ಭತ್ಯೆ ನೀಡುವ ಕುರಿತು ಕ್ರಮ ಕೈಗೊಳ್ಳುತ್ತೇವೆ.
— ಶ್ರೀಧರ್ ಚಿನಗುಂಡಿ, ತಾಲೂಕು ಪಂಚಾಯಿತಿ ಇಒ



