ಬೆಂಗಳೂರು: ರೇಷನ್ ಕಾರ್ಡ್ ಇ-ಕೆವೈಸಿ ಪೂರ್ಣಗೊಳಿಸಲು ಸೆ.30ರವರೆಗೆ ಮಾತ್ರ ಕಾಲಾವಕಾಶವಿದ್ದು, ಇದೀಗ ಕೇವಲ 15 ದಿನಗಳು ಬಾಕಿ ಉಳಿದಿವೆ. ನಿಗದಿತ ಅವಧಿಯಲ್ಲಿ ಇ-ಕೆವೈಸಿ ಮಾಡಿಸದಿದ್ದರೆ ರೇಷನ್ ಕಾರ್ಡ್ ರದ್ದಾಗುವ ಆತಂಕ ಎದುರಾಗಿದೆ. ಆದರೆ ರಾಜ್ಯದಲ್ಲಿ ಇ-ಕೆವೈಸಿ ಪ್ರಕ್ರಿಯೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದುವರೆಗೆ ಶೇ.36.44ರಷ್ಟು ಮಾತ್ರ ಪೂರ್ಣಗೊಂಡಿದೆ.
ರಾಜ್ಯದಲ್ಲಿ ಒಟ್ಟು 2.67 ಕೋಟಿ ರೇಷನ್ ಕಾರ್ಡ್‌ಗಳ ಇ-ಕೆವೈಸಿ ಮಾಡಬೇಕಿದೆ. ಈ ಪೈಕಿ ಇದುವರೆಗೆ 97.54 ಲಕ್ಷ ಕಾರ್ಡ್‌ಗಳ ಇ-ಕೆವೈಸಿ ಪೂರ್ಣಗೊಂಡಿದ್ದು, ಇನ್ನೂ 1.70 ಕೋಟಿ ಕಾರ್ಡ್‌ಗಳ ಇ-ಕೆವೈಸಿ ಬಾಕಿ ಉಳಿದಿದೆ. ಒಂದೆಡೆ ಸರ್ವರ್ ಸಮಸ್ಯೆ ಕಾಡುತ್ತಿದ್ದರೆ, ಮತ್ತೊಂದೆಡೆ ಗಡುವು ಸಮೀಪಿಸುತ್ತಿರುವುದು ರೇಷನ್ ಕಾರ್ಡ್‌ದಾರರಲ್ಲಿ ಆತಂಕ ಮೂಡಿಸಿದೆ.
ಇ-ಕೆವೈಸಿ ಪೂರ್ಣಗೊಳಿಸಲು ಸೆ.30 ಕೊನೆಯ ದಿನವಾಗಿದ್ದು, ಪ್ರಕ್ರಿಯೆ ಪೂರ್ಣಗೊಳಿಸಲು ಹೆಚ್ಚುವರಿ ಕಾಲಾವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಕಡಿಮೆ ಅವಧಿಯಲ್ಲಿ ಕೋಟ್ಯಂತರ ಕಾರ್ಡ್‌ಗಳ ಇ-ಕೆವೈಸಿ ಪೂರ್ಣಗೊಳಿಸುವುದು ಸವಾಲಾಗಿದ್ದು, ಸರ್ವರ್ ಸಮಸ್ಯೆ ನಿವಾರಿಸಿ ಗಡುವು ವಿಸ್ತರಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಬೆಂಗಳೂರು ಪೂರ್ವ, ರಾಯಚೂರು, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಇ-ಕೆವೈಸಿ ಪ್ರಕ್ರಿಯೆ ಶೇ.50ರ ಗಡಿ ದಾಟಿದೆ. ಆದರೆ ಉಡುಪಿ, ಬಳ್ಳಾರಿ, ಬೀದರ್, ಶಿವಮೊಗ್ಗ, ಕೊಪ್ಪಳ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಇ-ಕೆವೈಸಿ ಪ್ರಮಾಣ ಶೇ.20ರಿಂದ 25ರಷ್ಟಿದೆ.



