ಬೆಂಗಳೂರು: ತುಮಕೂರು ರಸ್ತೆ ಮೂಲಕ ಸಂಚರಿಸುವ ವಾಹನ ಸವಾರರಿಗೆ ಬೆಂಗಳೂರು ಸಂಚಾರ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ.
ಪೀಣ್ಯ ಎಲಿವೇಟೆಡ್ ಫ್ಲೈಓವರ್ನಲ್ಲಿ ಡಾಂಬರೀಕರಣ ಹಾಗೂ ದುರಸ್ತಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ–4ರ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆಯ ಮೇಲೆ ಜುಲೈ 27ರಿಂದ ಆಗಸ್ಟ್ 5ರವರೆಗೆ ಸಂಚಾರ ನಿರ್ಬಂಧ ಜಾರಿಯಲ್ಲಿರಲಿದೆ. ಸಾಮಾನ್ಯ ದಿನಗಳಲ್ಲಿ (ಸೋಮವಾರದಿಂದ ಶುಕ್ರವಾರದವರೆಗೆ) ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಹಾಗೂ ಶನಿವಾರ ಮತ್ತು ಭಾನುವಾರ ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ವಾಹನ ಸಂಚಾರ ಬಂದ್ ಮಾಡಲಾಗುತ್ತದೆ.
ಈ ನಿರ್ಬಂಧವು ನೆಲಮಂಗಲ ಅಥವಾ ತುಮಕೂರು ಕಡೆಯಿಂದ ಬೆಂಗಳೂರು ನಗರಕ್ಕೆ ಬರುವ ವಾಹನಗಳಿಗೆ ಮಾತ್ರ ಅನ್ವಯವಾಗಲಿದೆ. ಬೆಂಗಳೂರಿನಿಂದ ಹೊರಹೋಗುವ ವಾಹನಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪರ್ಯಾಯ ಮಾರ್ಗ:
ನೆಲಮಂಗಲದಿಂದ ಬೆಂಗಳೂರು ಕಡೆಗೆ ಬರುವ ವಾಹನಗಳು ಕೆನ್ನಮೆಟಲ್ ಫ್ಯಾಕ್ಟರಿ ಬಳಿ ಫ್ಲೈಓವರ್ ಕೆಳಭಾಗದ ರಾಷ್ಟ್ರೀಯ ಹೆದ್ದಾರಿ–4 ಹಾಗೂ ಸರ್ವಿಸ್ ರಸ್ತೆಯ ಮೂಲಕ 8ನೇ ಮೈಲಿ ತಲುಪಬೇಕು. ಬಳಿಕ ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್ಆರ್ಎಸ್ ಜಂಕ್ಷನ್ ಹಾಗೂ ಗೊರಗುಂಟೆಪಾಳ್ಯ ಮಾರ್ಗವಾಗಿ ಸಂಚರಿಸಬಹುದು ಎಂದು ಸೂಚಿಸಲಾಗಿದೆ.
ಪೀಣ್ಯ ಮೇಲ್ಸೇತುವೆ ಬೆಂಗಳೂರು–ತುಮಕೂರು ರಸ್ತೆಯ ಪ್ರಮುಖ ಸಂಪರ್ಕ ಮಾರ್ಗವಾಗಿರುವುದರಿಂದ ಕಾಮಗಾರಿ ನಡೆಯುವ ಸಮಯದಲ್ಲಿ ಈ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಹಾಗೂ ಅಗತ್ಯವಿದ್ದರೆ ಈ ಸಮಯದಲ್ಲಿ ಪ್ರಯಾಣ ತಪ್ಪಿಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.



