ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: “ಜೀವನ ಎಂಬ ಭವಸಾಗರವನ್ನು ದಾಟಿಸುವವನೇ ಗುರು. ಉಸಿರು ಇರುವವರೆಗೂ ದೇವರು, ಹೆತ್ತವರು ಹಾಗೂ ಗುರುವನ್ನು ಸ್ಮರಿಸುತ್ತ ಸನ್ಮಾರ್ಗದಲ್ಲಿ ಬದುಕಬೇಕು. ಗುರುನಾಮ ಸ್ಮರಣೆ ಜೀವನಕ್ಕೆ ಆತ್ಮಬಲ ಮತ್ತು ಸರಿದಾರಿಯನ್ನು ತೋರಿಸುತ್ತದೆ” ಎಂದು ಮುಕ್ತಿಮಂದಿರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಪಟ್ಟಣದ ಶ್ರೀ ಬಾಳೇಹಳ್ಳಿಮಠ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಗುರುವಂದನೆ, ಸಾಧಕರ ಸನ್ಮಾನ, ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ಕಾರ್ಯಚಟುವಟಿಕೆಗಳು, ಚಿತ್ರಕಲಾ ಪ್ರದರ್ಶನ ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ ಅವರ ನಿವೃತ್ತಿ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ತಂದೆ-ತಾಯಿ ಜನ್ಮ ನೀಡಿದರೆ, ಗುರು ಬದುಕಿಗೆ ದಿಕ್ಕು, ಗುರಿ ಮತ್ತು ಅರ್ಥ ಕಲ್ಪಿಸುತ್ತಾರೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವುದೇ ಗುರುಗಳಿಗೆ ಸಲ್ಲಿಸುವ ನಿಜವಾದ ಗೌರವ. ಹುಟ್ಟು ಅನಿಶ್ಚಿತ, ಸಾವು ನಿಶ್ಚಿತ. ಆದರೆ ಈ ಎರಡರ ನಡುವಿನ ಬದುಕಿನಲ್ಲಿ ಸಮಾಜಕ್ಕೆ ಸಲ್ಲಿಸುವ ಸೇವೆ, ಮಾನವೀಯ ಮೌಲ್ಯಗಳು ಹಾಗೂ ಶಿಕ್ಷಣದ ಮೂಲಕ ಮೂಡಿಸುವ ಸಂಸ್ಕಾರಗಳೇ ಶಾಶ್ವತವಾಗಿ ಉಳಿಯುತ್ತವೆ ಎಂದು ಶ್ರೀಗಳು ಹೇಳಿದರು.
ಟಿಬೇಟಿಯನ್ ಕ್ಯಾಂಪ್‌ನ ಜಂಪಾ ಲೋಬ್ಸಂಗ್ ಗುರೂಜಿ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ ಹಾಗೂ ಸಣ್ಣೀರಪ್ಪ ಹಳೆಪ್ಪನವರ ಮಾತನಾಡಿ, ನಿವೃತ್ತ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ ಅವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಸ್ಮರಣೀಯವಾಗಿದೆ. “ಶಿಕ್ಷಕ ಎಂದಿಗೂ ನಿವೃತ್ತನಾಗುವುದಿಲ್ಲ; ಆತ ತನ್ನ ವಿದ್ಯಾರ್ಥಿಗಳ ಸಾಧನೆಗಳಲ್ಲಿ ಸದಾ ಜೀವಂತವಾಗಿರುತ್ತಾನೆ” ಎಂದು ಹೇಳಿದರು.
ಜಿ.ಎಂ. ಮುಂದಿನಮನಿ ಅವರು ತಮ್ಮ ಸುದೀರ್ಘ ಸೇವಾವಧಿಯಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣ, ಗುಣಮಟ್ಟದ ಶಿಕ್ಷಣದ ವಿಸ್ತರಣೆ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಶಿಕ್ಷಣದ ಮೂಲಕ ಸಮಾಜ ಪರಿವರ್ತನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಶಾಲೆಯನ್ನು ಉತ್ತಮ ನಾಗರಿಕರನ್ನು ರೂಪಿಸುವ ದೇವಾಲಯವನ್ನಾಗಿ ರೂಪಿಸುವಲ್ಲಿ ಅವರ ಸೇವೆ ಆದರ್ಶಪ್ರಾಯವಾಗಿದೆ ಎಂದು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಎಸ್. ಪಟ್ಟಣಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಡಾ. ಎಂ. ರಾಮಚಂದ್ರ, ಐ.ಬಿ. ಬೆನಕೊಪ್ಪ, ಸುಲೇಮಾನ ಕಣಕೆ, ಮಂಜುನಾಥ ಮಾಗಡಿ, ತಿಮ್ಮರಡ್ಡಿ ಮರಡ್ಡಿ, ಸೋಮಣ್ಣ ಡಾಣಗಲ್, ಪ್ರವೀಣ ಬಾಳಿಕಾಯಿ, ಮಹೇಂದ್ರ ಉಡಚಪ್ಪನವರ, ಅಬ್ದುಲ್ ಸತ್ತೂರ, ಶರಣಪ್ರಕಾಶ ಪಾಟೀಲ, ಎಂ.ಕೆ. ಲಮಾಣಿ, ವಿ.ಎ. ಹುಡೇದ, ಜಿ.ಎನ್. ಉಪ್ಪಿನ, ಹರೀಶ ಲಕ್ಷ್ಮೇಶ್ವರ, ಬಸವರಾಜ ಹಿರೇಮನಿ, ಡಾ. ಸಂಗಮೇಶ ತಮ್ಮನಗೌಡ್ರ, ಬಿ.ಎಸ್. ಹರ್ಲಾಪೂರ, ವಿಜು ಕಿರೇಸೂರ, ಎಂ.ಎನ್. ಭರಮಗೌಡ್ರ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಲಿಸಿದ ಗುರುಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಪುಸ್ತಕ ಬಿಡುಗಡೆ ನೆರವೇರಿತು. ಕು. ಪ್ರೀತಂ ಕಬ್ಬೇರಹಳ್ಳಿ, ಕು. ಜ್ಞಾನಾ ಗುರುರಾಜ, ಫಕ್ಕೀರಪ್ಪ ದೊಡ್ಡಮನಿ ಹಾಗೂ ಡಾ. ಎಚ್.ಸಿ. ದಿವುಶಂಕರ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಳಿಕ ಜಿ.ಎಂ. ಮುಂದಿನಮನಿ ದಂಪತಿಗಳನ್ನು ಅಭಿಮಾನಿ ಬಳಗ ಹಾಗೂ ಶಿಕ್ಷಕ ಬಳಗದವರು ಪಟ್ಟಣದಲ್ಲಿ ಸಾರೋಟ ಮೆರವಣಿಗೆ ನಡೆಸಿ ಅದ್ಧೂರಿಯಾಗಿ ಸನ್ಮಾನಿಸಿದರು.
“ಉಸಿರು ಇರುವವರೆಗೂ ದೇವರು, ಹೆತ್ತವರು ಹಾಗೂ ಗುರುವನ್ನು ಸ್ಮರಿಸುತ್ತ ಬದುಕಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ.”
– ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಮುಕ್ತಿಮಂದಿರ



