ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜಕ್ಕಲಿ ಗ್ರಾಮದ ಗ್ರಾಮ ವಿದ್ಯುತ್ ಪ್ರತಿನಿಧಿಯಾಗಿ 22 ವರ್ಷಗಳ ಕಾಲ ಹೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಹೇಶ ಹಿರೇಮಠ ಅವರಿಗೆ ಶನಿವಾರ ನರೇಗಲ್ಲ ಹೆಸ್ಕಾಂ ಕಚೇರಿಯಲ್ಲಿ ಆತ್ಮೀಯ ಸನ್ಮಾನ ಹಾಗೂ ಭಾವಪೂರ್ಣ ಬೀಳ್ಕೊಡುಗೆ ನೀಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ರೋಣ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ವಿ.ಟಿ. ರಾಜೂರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹೆಸ್ಕಾಂ ಇಲಾಖೆ ಮತ್ತು ಗ್ರಾಹಕರ ನಡುವಿನ ಸಂಪರ್ಕ ಕೊಂಡಿಯಾಗಿ ಮಹೇಶ ಹಿರೇಮಠ ಅವರು ಪ್ರಾಮಾಣಿಕತೆ, ನಿಷ್ಠೆ ಹಾಗೂ ಕರ್ತವ್ಯಪ್ರಜ್ಞೆಯಿಂದ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಲಾಖೆಗೆ ಉತ್ತಮ ಹೆಸರು ತಂದಿದ್ದಾರೆ ಎಂದು ಶ್ಲಾಘಿಸಿದರು.
ರೋಣ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ ಕೋಚಿ ಮಾತನಾಡಿ, ಗ್ರಾಮೀಣ ವಿದ್ಯುತ್ ಸರಬರಾಜು, ಬಾಕಿ ವಸೂಲಿ ಹಾಗೂ ಇಲಾಖೆಯ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿದ ಅವರ ಸೇವೆ ಯುವ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಮಾದರಿಯಾಗಿದೆ ಎಂದರು.
ಸನ್ಮಾನ ಸ್ವೀಕರಿಸಿದ ಮಹೇಶ ಹಿರೇಮಠ, ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದಲೇ ತಮ್ಮ ಸೇವೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಯಿತು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದನ್ನೇ ಕರ್ತವ್ಯವೆಂದು ಭಾವಿಸಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಎಚ್. ಅಮರಶೆಟ್ಟಿ, ಎಂ.ಎನ್. ಮುಲ್ಲಾ, ಐ.ಎ. ಚೌಭಾರಿ, ವಿ.ಆರ್. ಸರ್ವಿ, ಎಂ.ಜೆ. ಹುಡೇದ, ವೀರೇಶ ಸಜ್ಜನ್, ಮರಿಯಪ್ಪ ಅಳವಂಡಿ, ಶರಣಪ್ಪ ಚವಡಿ, ಮಹೇಶ ಹಡಪದ, ಪ್ರಕಾಶ ವಾಲಿ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಗ್ರಾಮ ವಿದ್ಯುತ್ ಪ್ರತಿನಿಧಿಗಳು ಹಾಗೂ ಹಿರೇಮಠ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.
“ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸಿ ಮಹೇಶ ಹಿರೇಮಠ ಅವರು ಇಲಾಖೆಗೆ ಉತ್ತಮ ಹೆಸರು ತಂದುಕೊಟ್ಟಿದ್ದಾರೆ.”
– ವಿ.ಟಿ. ರಾಜೂರ, ಕಾರ್ಯನಿರ್ವಾಹಕ ಅಭಿಯಂತರ, ಹೆಸ್ಕಾಂ ರೋಣ ವಿಭಾಗ



