ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆ ನಡೆಯುತ್ತಿರುವ ನಡುವೆಯೇ ರಾಜ್ಯ ಸರ್ಕಾರ ಮಹಿಳಾ ಫಲಾನುಭವಿಗಳಿಗೆ ಸಿಹಿಸುದ್ದಿ ನೀಡಿದೆ.
ಬಾಕಿ ಉಳಿದಿರುವ 33ನೇ ಕಂತಿನ ಹಣವನ್ನು ಇದೇ ತಿಂಗಳಲ್ಲಿ ಅರ್ಹ ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ.
ಗೃಹಲಕ್ಷ್ಮಿ ಯೋಜನೆಯಡಿ ಅನರ್ಹ ಫಲಾನುಭವಿಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಸರ್ಕಾರ ಮನೆ-ಮನೆ ಸರ್ವೆ ನಡೆಸಿ ಯೋಜನೆಯನ್ನು ಪರಿಷ್ಕರಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪರಿಷ್ಕರಣೆ ಪೂರ್ಣಗೊಳ್ಳುವವರೆಗೆ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡದಿರಲು ಈ ಹಿಂದೆ ಇಲಾಖೆ ನಿರ್ಧರಿಸಿತ್ತು.
ಆದರೆ ಇದೀಗ 33ನೇ ಕಂತಿನ ಹಣವನ್ನು ಇದೇ ತಿಂಗಳಲ್ಲಿ ಬಿಡುಗಡೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರೊಂದಿಗೆ ಮುಖ್ಯಮಂತ್ರಿ ನಡೆಸಿದ ಸಭೆಯಲ್ಲಿ ಈ ಕುರಿತು ಸೂಚನೆ ನೀಡಲಾಗಿದೆ.
ಹೀಗಾಗಿ ಅನರ್ಹ ಫಲಾನುಭವಿಗಳ ಪತ್ತೆಗಾಗಿ ಮನೆ-ಮನೆ ಸರ್ವೆ ನಡೆಯುತ್ತಿದ್ದರೂ, ಅರ್ಹ ಗೃಹಲಕ್ಷ್ಮಿ ಫಲಾನುಭವಿಗಳಿಗೆ 33ನೇ ಕಂತಿನ ಹಣ ದೊರೆಯಲಿದೆ. ಇಂದಿನಿಂದಲೇ ಮನೆ-ಮನೆ ಸರ್ವೆ ಕಾರ್ಯವೂ ಆರಂಭವಾಗಲಿದೆ.



