ಹಾಸನ: ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯಿಂದ ಲಕ್ಷಾಂತರ ರೂ. ಮೌಲ್ಯದ ಬಾಳೆ ಬೆಳೆ ನಾಶವಾಗಿರುವ ಘಟನೆ ವರದಿಯಾಗಿದೆ.
ಅರಕಲಗೂಡು ತಾಲೂಕಿನ ಬಸವನಹಳ್ಳಿಕೊಪ್ಪಲು ಗ್ರಾಮದಲ್ಲಿ ಬಿರುಗಾಳಿಗೆ ಲೋಕೇಶ್, ಪರಮೇಶ್, ನಾಗರಾಜ್ ಸೇರಿದಂತೆ ಹಲವು ರೈತರಿಗೆ ಸೇರಿದ ಸಾವಿರಾರು ಬಾಳೆ ಗಿಡಗಳು ನೆಲಕಚ್ಚಿವೆ.
ಕಟಾವಿಗೆ ಸಿದ್ಧವಾಗಿದ್ದ ಬಾಳೆಗೊನೆಗಳು ಗಾಳಿಯ ತೀವ್ರತೆಗೆ ಮುರಿದು ಬಿದ್ದಿದ್ದು, ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಇನ್ನೂ ಒಂದು ತಿಂಗಳಲ್ಲಿ ಕೊಯ್ಲು ಮಾಡಿ ಮಾರಾಟ ಮಾಡಬೇಕಿದ್ದ ಬೆಳೆ ಹಾನಿಯಾಗಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
ಇದೇ ಗ್ರಾಮದ ಕೆಲ ರೈತರು ಬೆಳೆದಿದ್ದ ಮೆಕ್ಕೆಜೋಳ ಬೆಳೆ ಕೂಡ ಹಾನಿಗೊಳಗಾಗಿದ್ದು, ಎರಡು ವಾಸದ ಮನೆಗಳ ಮೇಲ್ಛಾವಣಿ ಹಾರಿಹೋಗಿವೆ. ಪ್ರಕೃತಿ ವಿಕೋಪದಿಂದ ಉಂಟಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



