ಬೆಂಗಳೂರು: ನಗರದಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಏರಿಕೆಯಾಗುತ್ತಿದ್ದಂತೆ ಕಳ್ಳರ ಕಾಟ ಮತ್ತೆ ಹೆಚ್ಚಾಗಿದೆ.
ದಾಸರಹಳ್ಳಿ ಎಂಟನೇ ಮೈಲಿ ಸಮೀಪದ ಹಾವನೂರಿನ ಎಂಬಿ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ಭಾರೀ ಕಳ್ಳತನ ನಡೆದಿದ್ದು, ಸುಮಾರು 1.20 ಕೋಟಿ ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು ಕದಿಯಲಾಗಿದೆ.
ಎರಡು ದಿನಗಳ ಹಿಂದೆ ನಡೆದ ಈ ಕಳ್ಳತನವನ್ನು ಅತ್ಯಂತ ಯೋಜಿತವಾಗಿ ನಡೆಸಲಾಗಿದೆ. ಕಳ್ಳರು ಮಳಿಗೆಯ ಹಿಂಭಾಗದ ಕೋಣೆಯ ಬೀಗ ಮುರಿದು ಒಳನುಗ್ಗಿ, ನಂತರ ಗೋಡೆಯನ್ನು ಕೊರೆದು ಅಂಗಡಿಗೆ ಪ್ರವೇಶಿಸಿದ್ದಾರೆ. ಈ ವೇಳೆ ಸುಮಾರು 70 ಕೆಜಿ ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ.
ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಬಾಗಲಗುಂಟೆ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳಿಗೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕಳ್ಳರು ಬಳಸಿದ ವಿಧಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ನಗರದಲ್ಲಿ ಇತ್ತೀಚೆಗೆ ಸರಣಿ ಕಳ್ಳತನಗಳು ಹೆಚ್ಚುತ್ತಿರುವುದು ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.



