ಬೆಂಗಳೂರು: ನಗರದಲ್ಲಿನ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಆಸ್ತಿ ತೆರಿಗೆ ಪಾವತಿಯಲ್ಲಿ ನೀಡಲಾಗುತ್ತಿದ್ದ ಶೇ 5ರಷ್ಟು ರಿಯಾಯಿತಿ ಅವಧಿಯನ್ನು ಮೇ 31, 2026ರವರೆಗೆ ವಿಸ್ತರಿಸಲಾಗಿದೆ.
ಈ ನಿರ್ಧಾರದಿಂದ ಗ್ರೇಟರ್ ಬೆಂಗಳೂರು ಪ್ರದೇಶದ ಐದು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಸುಮಾರು 25 ಲಕ್ಷ ಆಸ್ತಿ ಮಾಲೀಕರಿಗೆ ನೇರ ಲಾಭವಾಗಲಿದೆ. ಸಾಮಾನ್ಯವಾಗಿ ಏಪ್ರಿಲ್ ಅಂತ್ಯಕ್ಕೆ ಈ ರಿಯಾಯಿತಿ ಅವಧಿ ಮುಕ್ತಾಯವಾಗುತ್ತಿತ್ತು.
ಆಸ್ತಿ ತೆರಿಗೆ ಪಾವತಿಯಲ್ಲಿ ಉಂಟಾದ ತಾಂತ್ರಿಕ ಗೊಂದಲಗಳು ಹಾಗೂ ಬಲ್ಕ್ ವೇಸ್ಟ್ ಜನರೇಟರ್ ವರ್ಗೀಕರಣದ ಅಸ್ಪಷ್ಟತೆ ಹಿನ್ನೆಲೆಯಲ್ಲಿ ಹಲವು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಜೊತೆಗೆ ಮೇ ತಿಂಗಳಲ್ಲಿ ಶಾಲಾ ಶುಲ್ಕ ಸೇರಿದಂತೆ ಗೃಹ ವೆಚ್ಚಗಳು ಹೆಚ್ಚಾಗುವ ಕಾರಣದಿಂದ ರಿಯಾಯಿತಿ ಅವಧಿ ವಿಸ್ತರಿಸಲು ಸಾರ್ವಜನಿಕರಿಂದ ಬೇಡಿಕೆ ವ್ಯಕ್ತವಾಗಿತ್ತು.
ಈ ಹಿನ್ನೆಲೆ ಸರ್ಕಾರ ಅವಧಿ ವಿಸ್ತರಣೆ ಮಾಡಿದ್ದು, ಇದರಿಂದ ತೆರಿಗೆ ಪಾವತಿ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ವ್ಯಕ್ತವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತೆರಿಗೆ ಸಂಗ್ರಹದಲ್ಲಿ ಸುಮಾರು 500 ಕೋಟಿ ರೂಪಾಯಿ ಕೊರತೆ ಉಂಟಾಗಿದೆ. ಕಳೆದ ವರ್ಷ ಸುಮಾರು 1,500 ಕೋಟಿ ರೂಪಾಯಿ ಸಂಗ್ರಹವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುವರಿ ಅವಧಿ ನೀಡುವುದರಿಂದ ಮಾಲೀಕರು ತೆರಿಗೆ ಪಾವತಿಸಲು ಮುಂದಾಗುತ್ತಾರೆ ಮತ್ತು ಪಾಲಿಕೆಯ ಆದಾಯದ ಕೊರತೆಯನ್ನು ಭಾಗಶಃ ಭರ್ತಿ ಮಾಡಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.



