ಮುಂಬೈ: ಮದುವೆಯ ಬಳಿಕ ಚಿತ್ರರಂಗಕ್ಕೆ ವಿದಾಯ ಹೇಳಿದ್ದ ನಟಿ ಸೆಲೀನಾ ಜೇಟ್ಲಿ ಇದೀಗ ತಮ್ಮ ದಾಂಪತ್ಯ ಜೀವನದ ಸಂಕಷ್ಟವನ್ನು ಬಹಿರಂಗಪಡಿಸಿದ್ದಾರೆ. ಜರ್ಮನಿಯ ಉದ್ಯಮಿ ಪೀಟರ್ ಹಾಗ್ ವಿರುದ್ಧ ಗಂಭೀರ ಆರೋಪ ಮಾಡಿರುವ ಅವರು, ವಿಚ್ಛೇದನ ಪ್ರಕರಣದ ನಡುವೆ 20 ಕೋಟಿ ರೂಪಾಯಿ ಮೌಲ್ಯದ ತಮ್ಮ ಆಸ್ತಿಯನ್ನು ವರ್ಗಾಯಿಸುವಂತೆ ಪತಿ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕನ್ನಡದ ‘ಶ್ರೀಮತಿ’ ಚಿತ್ರ ಸೇರಿದಂತೆ ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದ ಸೆಲೀನಾ, ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿ, ವಿಚ್ಛೇದನ ಹೋರಾಟದ ವೇಳೆ ಆರ್ಥಿಕ ಮತ್ತು ಕಾನೂನು ಸಂಕಷ್ಟಗಳನ್ನು ಎದುರಿಸುತ್ತಿರುವುದಾಗಿ ತಿಳಿಸಿದರು. ಪತಿಯೊಂದಿಗೆ ನಡೆಯುತ್ತಿರುವ ಕಾನೂನು ಹೋರಾಟದಿಂದ ಜೀವನಾಂಶವೂ ಸಿಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಮಹಿಳೆಯರು ತಮ್ಮ ಅನುಭವದಿಂದ ಪಾಠ ಕಲಿಯಬೇಕು ಎಂದು ಹೇಳಿದ ಸೆಲೀನಾ, ಮದುವೆಗೆ ಮುನ್ನ ವಿವಾಹಪೂರ್ವ ಒಪ್ಪಂದಕ್ಕೆ ಸಹಿ ಮಾಡಿಸಿಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದರು. ಮಹಿಳೆಯರು ತಮ್ಮ ಹೆಸರಿನಲ್ಲಿರುವ ಆಸ್ತಿ, ಹೂಡಿಕೆ ಮತ್ತು ಆರ್ಥಿಕ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ವೈಯಕ್ತಿಕ ಆಸ್ತಿಯ ಮೇಲೆ ಸಂಪೂರ್ಣ ಹಕ್ಕು ಉಳಿಸಿಕೊಳ್ಳುವುದೇ ಸುರಕ್ಷಿತ ಮಾರ್ಗ ಎಂದು ಅವರು ಹೇಳಿದರು.
ಜರ್ಮನಿಯ ಪೀಟರ್ ಹಾಗ್ ಅವರನ್ನು ವಿವಾಹವಾಗಿದ್ದ ಸೆಲೀನಾ ಜೇಟ್ಲಿಗೆ ಮೂವರು ಮಕ್ಕಳಿದ್ದಾರೆ. ದೀರ್ಘ ವಿರಾಮದ ಬಳಿಕ ಅವರು ಮತ್ತೆ ಚಿತ್ರರಂಗಕ್ಕೆ ಮರಳಿದ್ದು, ‘ಸಿಸ್ಟರ್ ನಿವೇದಿತಾ’ ಚಿತ್ರದ ಮೂಲಕ ಅಭಿನಯ ಜೀವನಕ್ಕೆ ಹೊಸ ಆರಂಭ ನೀಡಿದ್ದಾರೆ.



