HomeSports NewsRCB Champions: ನಾನು ನಾಯಕನಾಗಿ ಕಪ್ ಎತ್ತುತ್ತೇನೆ ಎಂದು ಕನಸಲ್ಲೂ ಊಹಿಸಿರಲಿಲ್ಲ: ರಜತ್ ಪಾಟಿದಾರ್

RCB Champions: ನಾನು ನಾಯಕನಾಗಿ ಕಪ್ ಎತ್ತುತ್ತೇನೆ ಎಂದು ಕನಸಲ್ಲೂ ಊಹಿಸಿರಲಿಲ್ಲ: ರಜತ್ ಪಾಟಿದಾರ್

For Dai;y Updates Join Our whatsapp Group

Spread the love

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಟ್ರೋಫಿ ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 155 ರನ್‌ಗಳಿಗೆ ಸೀಮಿತವಾಯಿತು. ಸ್ಪರ್ಧಾತ್ಮಕವಲ್ಲದ ಈ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ 18 ಓವರ್‌ಗಳಲ್ಲೇ ಐದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಪಂದ್ಯದ ಬಳಿಕ ಮಾತನಾಡಿದ ನಾಯಕ ರಜತ್ ಪಾಟಿದಾರ್, ಅಹಮದಾಬಾದ್ ಪಿಚ್‌ನಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಅನುಕೂಲಕರ ಎಂಬುದು ನಮಗೆ ಗೊತ್ತಿತ್ತು. ಅದಕ್ಕಾಗಿ ಟಾಸ್ ಗೆದ್ದ ತಕ್ಷಣ ಬೌಲಿಂಗ್ ಆಯ್ಕೆ ಮಾಡಿಕೊಂಡೆವು. ಎದುರಾಳಿ ತಂಡದ ಪ್ರಮುಖ ಬ್ಯಾಟರ್‌ಗಳನ್ನು ಆರಂಭದಲ್ಲೇ ಔಟ್ ಮಾಡುವ ತಂತ್ರ ರೂಪಿಸಿದ್ದೆವು. ನಮ್ಮ ಬೌಲರ್‌ಗಳು ಅದನ್ನು ಯಶಸ್ವಿಯಾಗಿ ಜಾರಿಗೊಳಿಸಿದರು ಎಂದು ಹೇಳಿದರು.

ತಂಡದ ಬೌಲರ್‌ಗಳ ಪ್ರದರ್ಶನವನ್ನು ಶ್ಲಾಘಿಸಿದ ಅವರು, ಫೈನಲ್ ಪಂದ್ಯ ಮಾತ್ರವಲ್ಲ, ಇಡೀ ಟೂರ್ನಿಯಲ್ಲೂ ನಮ್ಮ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಭುವನೇಶ್ವರ್ ಕುಮಾರ್, ರಾಸಿಖ್ ಸಲಾಂ, ಜೋಶ್ ಹೇಝಲ್‌ವುಡ್, ಸುಯಶ್ ಶರ್ಮಾ, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ ಸೇರಿದಂತೆ ಎಲ್ಲರೂ ತಂಡದ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಾಂಪಿಯನ್ ನಾಯಕನಾಗಿ ಟ್ರೋಫಿ ಎತ್ತಿಹಿಡಿದ ಕ್ಷಣದ ಬಗ್ಗೆ ಮಾತನಾಡಿದ ಪಾಟಿದಾರ್, “ನಾನು ಆರ್‌ಸಿಬಿ ನಾಯಕನಾಗುತ್ತೇನೆ, ನಾಯಕನಾಗಿ ಟ್ರೋಫಿ ಗೆಲ್ಲುತ್ತೇನೆ ಎಂದು ಯಾವತ್ತೂ ಊಹಿಸಿರಲಿಲ್ಲ. ಇದು ನನ್ನ ಜೀವನದ ಅತ್ಯಂತ ವಿಶೇಷ ಕ್ಷಣ. ಇದಕ್ಕೆಲ್ಲ ನಾನು ಕೃತಜ್ಞನಾಗಿದ್ದೇನೆ” ಎಂದು ಭಾವುಕರಾದರು.

ಇದೇ ವೇಳೆ ತಂಡದ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರ ಪಾತ್ರವನ್ನು ಕೊಂಡಾಡಿದ ಪಾಟಿದಾರ್, ವಿರಾಟ್ ಭಾಯ್ ಯಾವಾಗಲೂ ತಂಡದ ಆಟಗಾರ. ಹೊಸ ಆಟಗಾರರು ಅಥವಾ ಯುವ ಕ್ರಿಕೆಟಿಗರು ತಂಡಕ್ಕೆ ಬಂದಾಗ ಅವರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಾರೆ. ಖುದ್ದಾಗಿ ಮಾತನಾಡಿ ಅವರಿಗೆ ಧೈರ್ಯ ತುಂಬುತ್ತಾರೆ. ತಂಡದ ಒಳಗಿನ ವಾತಾವರಣ ಉತ್ತಮವಾಗಿರಲು ಅವರ ಕೊಡುಗೆ ಅಪಾರ ಎಂದರು.

ಕಳೆದ ಆವೃತ್ತಿಯ ಫೈನಲ್ ಮತ್ತು ಈ ಬಾರಿಯ ಫೈನಲ್ ನಡುವಿನ ವ್ಯತ್ಯಾಸವನ್ನು ವಿವರಿಸಿದ ಅವರು, “2025ರ ಫೈನಲ್‌ನಲ್ಲಿ ಮೊದಲ ಟ್ರೋಫಿ ಗೆಲ್ಲಬೇಕೆಂಬ ಒತ್ತಡ ನಮ್ಮ ಮೇಲೆ ಇತ್ತು. ಆದರೆ ಈ ಬಾರಿ ತಂಡದ ಫಾರ್ಮ್, ಆಟಗಾರರ ಪ್ರದರ್ಶನ ಮತ್ತು ಪರಸ್ಪರ ನಂಬಿಕೆ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಹೀಗಾಗಿ ಯಾವುದೇ ಒತ್ತಡವಿಲ್ಲದೆ ಫೈನಲ್ ಆಡಲು ಸಾಧ್ಯವಾಯಿತು” ಎಂದು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!