ಬೇಸಿಗೆ ಶಾಖ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಎಂದು ತಜ್ಞರು ಸೂಚಿಸಿದ್ದಾರೆ.
ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ಬೆಳಗಿನ ವಾಕ್ ಮಾಡುವವರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.
ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ವಾಕ್ ಮಾಡುವುದು ವ್ಯಕ್ತಿಯ ಆರೋಗ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲದವರು ಹಾಗೂ ದೇಹದಲ್ಲಿ ನೀರಿನ ಕೊರತೆ ಇಲ್ಲದಿದ್ದರೆ ಬೆಳಗಿನ ವಾಕ್ ಮಾಡಬಹುದು. ಆದರೆ ಎಲ್ಲರಿಗೂ ಇದು ಸೂಕ್ತವಾಗುವುದಿಲ್ಲ ಎಂದು ಎಚ್ಚರಿಸಲಾಗಿದೆ.
ವಾಕ್ ಮಾಡುವ ವೇಳೆ ಹೆಚ್ಚು ಆಯಾಸ, ದಣಿವು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ವಿಶೇಷವಾಗಿ ಮಧುಮೇಹ ಇರುವವರು ಖಾಲಿ ಹೊಟ್ಟೆಯಲ್ಲಿ ವಾಕ್ ಮಾಡುವುದನ್ನು ತಪ್ಪಿಸಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ತಕ್ಷಣ ಕಡಿಮೆಯಾಗುವ ಸಾಧ್ಯತೆ ಇದ್ದು, ತಲೆಸುತ್ತು ಅಥವಾ ದುರ್ಬಲತೆ ಉಂಟಾಗಬಹುದು.
ಇಂತಹವರು ಬೆಳಿಗ್ಗೆ ಸ್ವಲ್ಪ ಪ್ರೋಟೀನ್‌ಯುಕ್ತ ಆಹಾರ ಸೇವಿಸಿ ವಾಕ್‌ಗೆ ಹೋಗುವುದು ಉತ್ತಮ. ಉದಾಹರಣೆಗೆ ನೆನೆಸಿದ ಕಡಲೆ ಸೇವನೆ ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಬೇಸಿಗೆಯಲ್ಲಿ ಹೆಚ್ಚು ಬೆವರು ಬರುತ್ತಿರುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಅಪಾಯ ಹೆಚ್ಚಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಇದು ಇನ್ನಷ್ಟು ಪರಿಣಾಮ ಬೀರುತ್ತದೆ. ತಲೆನೋವು, ದಣಿವು ಮತ್ತು ನೀರಿನ ಕೊರತೆ ಸಮಸ್ಯೆಗಳು ಕಾಣಿಸಬಹುದಾದ್ದರಿಂದ ವಾಕ್‌ಗೆ ಹೊರಡುವ ಮೊದಲು ಸಾಕಷ್ಟು ನೀರು ಕುಡಿಯುವುದು ಅಗತ್ಯ.
ಇದಲ್ಲದೆ, ಬೆಳಗ್ಗೆ 5ರಿಂದ 6 ಗಂಟೆಯೊಳಗೆ ವಾಕ್ ಮಾಡುವುದು ಸೂಕ್ತ. ನಂತರ ಸೂರ್ಯನ ತಾಪಮಾನ ಹೆಚ್ಚಾಗುವುದರಿಂದ ಆರೋಗ್ಯದ ಮೇಲೆ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.



