ವಿಜಯಸಾಕ್ಷಿ ಸುದ್ದಿ, ಗದಗ: ಜನ್ಮದಿನವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ ಸಮಾಜಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಸಂದೇಶದೊಂದಿಗೆ ಕಪ್ಪತ್ತಗಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಚಂದ್ರಕಲಾ ಇಟಗಿಮಠ ಅವರು ತಮ್ಮ ಹಾಗೂ ಪುತ್ರನ ಜನ್ಮದಿನದ ಅಂಗವಾಗಿ ಎರಡು ದಿನಗಳ ಕಾಲ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದರು.
ಜುಲೈ 31ರಂದು ಬೆಳದಡಿ ತಾಂಡಾದ ಬ್ರಹ್ಮಾನಂದಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 160 ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ, ಆರೋಗ್ಯ, ಸ್ವಚ್ಛತೆ, ಪೌಷ್ಟಿಕ ಆಹಾರ ಹಾಗೂ ಆರೋಗ್ಯಕರ ಜೀವನಶೈಲಿ ಕುರಿತು ಜಾಗೃತಿ ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ಮಲ್ಲಸಮುದ್ರದ ಆನಂದ ವೃದ್ಧಾಶ್ರಮಕ್ಕೆ ಭೇಟಿ ನೀಡಿ ವೃದ್ಧರೊಂದಿಗೆ ಆತ್ಮೀಯವಾಗಿ ಸಮಯ ಕಳೆದರು.
ಆಗಸ್ಟ್ 1ರಂದು ಬೆಟಿಗೇರಿಯ ಮಂಜು ಶಿಕ್ಷಣ ಸಂಸ್ಥೆಯಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ, ಅವರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ ನಡೆಸಲಾಯಿತು.
ಆರೋಗ್ಯ ತಪಾಸಣೆಯನ್ನು ಡಾ. ದೀಪಾ ಮೂರಶಿಳ್ಳಿನ ಹಾಗೂ ಡಾ. ಕಲ್ಲೇಶ್ ಮೂರಶಿಳ್ಳಿನ ನಡೆಸಿ, ಮಕ್ಕಳಿಗೆ ಆರೋಗ್ಯದ ಕುರಿತು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎ.ಎಸ್. ಮಕಾನದಾರ, ಆನಂದ ವೃದ್ಧಾಶ್ರಮದ ಸಂಸ್ಥಾಪಕ ಗಂಗಾಧರ, ತೋಟಯ್ಯ ಗುಡ್ಡಿಮಠ, ಎಸ್‌ಡಿಎಂಸಿ ಅಧ್ಯಕ್ಷರು, ಶಿಕ್ಷಕರು, ಗ್ರಾಮಸ್ಥರು ಹಾಗೂ ಕಪ್ಪತ್ತಗಿರಿ ಫೌಂಡೇಶನ್ ಸದಸ್ಯರು ಭಾಗವಹಿಸಿದ್ದರು.
ಸಮಾಜದ ಆರೋಗ್ಯ, ಶಿಕ್ಷಣ, ವಿಶೇಷ ಚೇತನ ಮಕ್ಕಳು ಹಾಗೂ ವೃದ್ಧರ ಸೇವೆಗೆ ಜನ್ಮದಿನವನ್ನು ಸಮರ್ಪಿಸಿದ ಕಪ್ಪತ್ತಗಿರಿ ಫೌಂಡೇಶನ್‌ನ ಈ ಸಮಾಜಮುಖಿ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.



