ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬಸವನಹಳ್ಳಿ ಹಾಡಿಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ.
ಆಟವಾಡುತ್ತಿದ್ದ ವೇಳೆ ಶಾಲೆಯ ಗೇಟ್ ಏಕಾಏಕಿ ಕುಸಿದು ಬಿದ್ದ ಪರಿಣಾಮ 4 ವರ್ಷದ ಮಗು ಮೃತಪಟ್ಟಿದೆ.
ಮೃತ ಮಗುವನ್ನು ಅಪೂರ್ವ ಎಂದು ಗುರುತಿಸಲಾಗಿದೆ. ಆಕೆ ಸತೀಶ್ ಮತ್ತು ಪವಿತ್ರ ದಂಪತಿಯ ಪುತ್ರಿಯಾಗಿದ್ದು, ಮಗಳ ಸಾವಿನಿಂದ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ.
ಮಾಹಿತಿ ಪ್ರಕಾರ, ಮಗು ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಗೇಟ್ ಏಕಾಏಕಿ ಕುಸಿದು ಬಿದ್ದಿದೆ. ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ ಮಗುವನ್ನು ರಕ್ಷಿಸಲು ಪ್ರಯತ್ನಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಈ ಘಟನೆ ಬಳಿಕ ಬಸವನಹಳ್ಳಿ ಹಾಡಿಯಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಶಾಲಾ ಆವರಣದ ಸುರಕ್ಷತೆ ಬಗ್ಗೆ ಸಾರ್ವಜನಿಕರು ಪ್ರಶ್ನೆಗಳನ್ನು ಎತ್ತಿದ್ದಾರೆ.
ಘಟನೆ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



