HomeGadag Newsಪವಾಡಸದೃಶವಾಗಿ ಗರ್ಭಗುಡಿಯಿಂದ ಹೊರಬಂದ ರಾಚೋಟೇಶ್ವರ ಶ್ರೀಗಳು: 33 ದಿನಗಳ ಶಿವಯೋಗ ಸಮಾಧಿ ಸಂಪನ್ನ

ಪವಾಡಸದೃಶವಾಗಿ ಗರ್ಭಗುಡಿಯಿಂದ ಹೊರಬಂದ ರಾಚೋಟೇಶ್ವರ ಶ್ರೀಗಳು: 33 ದಿನಗಳ ಶಿವಯೋಗ ಸಮಾಧಿ ಸಂಪನ್ನ

For Dai;y Updates Join Our whatsapp Group

ಗದಗ; ತಾಲೂಕಿನ ಅಂತೂರ–ಬೆಂತೂರ ಗ್ರಾಮದ ಬೂದೀಶ್ವರ ಮಠದಲ್ಲಿ ಕಳೆದ 33 ದಿನಗಳಿಂದ ನಡೆಯುತ್ತಿದ್ದ ಅಪರೂಪದ ಶಿವಯೋಗ ಸಮಾಧಿ ಅನುಷ್ಠಾನ ಭಾನುವಾರ ಯಶಸ್ವಿಯಾಗಿ ಸಂಪನ್ನಗೊಂಡಿತು.

ಲೋಕಕಲ್ಯಾಣ, ವಿಶ್ವಶಾಂತಿ ಹಾಗೂ ಸಕಲ ಜೀವಿಗಳ ಒಳಿತಿಗಾಗಿ ಜೂನ್ 3ರಂದು ಶಿವಯೋಗ ಸಮಾಧಿಗೆ ಪ್ರವೇಶಿಸಿದ್ದ ಬೂದೀಶ್ವರ ಮಠದ ಪರಮಪೂಜ್ಯ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಭಾನುವಾರ ಗರ್ಭಗುಡಿಯಿಂದ ಆರೋಗ್ಯವಂತರಾಗಿ ಹೊರಬಂದು ಸಾವಿರಾರು ಭಕ್ತರಿಗೆ ದರ್ಶನ ನೀಡಿದರು.

ಶ್ರೀಗಳು ಗಾಳಿ, ಬೆಳಕು ಹಾಗೂ ಹೊರಜಗತ್ತಿನ ಯಾವುದೇ ಸಂಪರ್ಕವಿಲ್ಲದ ಗರ್ಭಗುಡಿಯೊಳಗೆ 33 ದಿನಗಳ ಕಾಲ ಅನ್ನ, ನೀರು ಸೇವಿಸದೆ, ಮಾತಾಡದೆ, ಸಂಪೂರ್ಣ ಮೌನದಲ್ಲಿ ಶಿವಧ್ಯಾನ ಹಾಗೂ ಯೋಗಸಾಧನೆಯಲ್ಲಿ ನಿರತರಾಗಿದ್ದರು. ಇಂತಹ ಕಠಿಣ ತಪಸ್ಸು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಅಪರೂಪವಾಗಿದ್ದು, ಈ ಕಾರಣದಿಂದಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಅಂತೂರ–ಬೆಂತೂರ ಗ್ರಾಮಕ್ಕೆ ಆಗಮಿಸಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ಭಾನುವಾರ ಬೆಳಗ್ಗಿನಿಂದಲೇ ಮಠದ ಆವರಣದಲ್ಲಿ ಭಕ್ತರ ಸಾಗರವೇ ನೆರೆದಿತ್ತು. ಶ್ರೀಗಳು ಯಾವಾಗ ಗರ್ಭಗುಡಿಯಿಂದ ಹೊರಬರುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ನಿಗದಿತ ಸಮಯದಲ್ಲಿ ಗರ್ಭಗುಡಿಯ ಬಾಗಿಲು ತೆರೆಯುತ್ತಿದ್ದಂತೆ “ಹರ ಹರ ಮಹಾದೇವ”, “ಜೈ ರಾಚೋಟೇಶ್ವರ ಶ್ರೀಗಳು” ಎಂಬ ಜಯಘೋಷಗಳು ಮುಗಿಲು ಮುಟ್ಟಿದವು. ಆರೋಗ್ಯವಂತರಾಗಿ ಹೊರಬಂದ ಶ್ರೀಗಳು ಮೊದಲು ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಭಕ್ತರಿಗೆ ಆಶೀರ್ವಾದ ಹಾಗೂ ದರ್ಶನ ನೀಡಿದರು.

ಶ್ರೀಗಳನ್ನು ಕಣ್ತುಂಬಿಕೊಳ್ಳಲು ಮಹಿಳೆಯರು, ಯುವಕರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದ ಭಕ್ತರು ಸರತಿ ಸಾಲಿನಲ್ಲಿ ನಿಂತು ಆಶೀರ್ವಾದ ಪಡೆದರು. ಶ್ರೀಗಳ ದರ್ಶನ ಪಡೆದ ಅನೇಕ ಭಕ್ತರು ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟ ದೃಶ್ಯಗಳು ಕಂಡುಬಂದವು. ಕೆಲವರು ಇದನ್ನು “ಶಿವನ ಕೃಪೆ” ಎಂದು ಬಣ್ಣಿಸಿದರೆ, ಮತ್ತಿತರರು “ಇದು ಅಪರೂಪದ ಆಧ್ಯಾತ್ಮಿಕ ಸಾಧನೆ” ಎಂದು ಅಭಿಪ್ರಾಯಪಟ್ಟರು.

ಮಠದ ಆವರಣದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ, ಮಂಗಳಾರತಿ ಹಾಗೂ ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಲಾಗಿತ್ತು. ಭಕ್ತರ ದಟ್ಟಣೆಯನ್ನು ನಿಯಂತ್ರಿಸಲು ಸ್ವಯಂಸೇವಕರು ಹಾಗೂ ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.

ಶಿವಯೋಗ ಸಮಾಧಿ ಅನುಷ್ಠಾನದ ಯಶಸ್ವಿ ಸಮಾಪ್ತಿಯಿಂದ ಅಂತೂರ–ಬೆಂತೂರ ಗ್ರಾಮ ಭಕ್ತಿಸಾಗರವಾಗಿ ಮಾರ್ಪಟ್ಟಿದ್ದು, ದಿನವಿಡೀ ಭಕ್ತರ ಸಂಚಾರ ಮುಂದುವರಿದಿತ್ತು.

ಶಿವಯೋಗ ಸಮಾಧಿಯ ಸಂದೇಶ

“ದೇಹದ ಮಿತಿಗಳನ್ನು ಮೀರಿ ಆತ್ಮಸಾಧನೆಯ ಮೂಲಕ ಲೋಕಕಲ್ಯಾಣದ ಸಂಕಲ್ಪವನ್ನು ಸಾಕಾರಗೊಳಿಸುವುದೇ ಶಿವಯೋಗ ಸಮಾಧಿಯ ಮಹತ್ವ. ರಾಚೋಟೇಶ್ವರ ಶ್ರೀಗಳ 33 ದಿನಗಳ ಅನುಷ್ಠಾನ ಭಕ್ತರಲ್ಲಿ ಭಕ್ತಿ, ನಂಬಿಕೆ ಹಾಗೂ ಆಧ್ಯಾತ್ಮಿಕ ಚೈತನ್ಯವನ್ನು ಮತ್ತಷ್ಟು ಬಲಪಡಿಸಿದೆ.”

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img