ವಿಜಯಸಾಕ್ಷಿ ಸುದ್ದಿ, ಗದಗ: ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಬೆಳೆಗಳಿಗೆ ಸಂಬಂಧಿಸಿದ ಅಂಕಿ-ಅಂಶಗಳು ಮತ್ತು ಬೆಳೆ ವಿಸ್ತೀರ್ಣದ ಮಾಹಿತಿ ನಿಖರವಾಗಿರಬೇಕು. ತಪ್ಪು ಮಾಹಿತಿ ದಾಖಲಾದರೆ ರೈತರಿಗೆ ಬೆಳೆ ವಿಮೆ ಹಾಗೂ ಸರ್ಕಾರಿ ಸೌಲಭ್ಯಗಳ ವಿತರಣೆಯಲ್ಲಿ ತೊಂದರೆ ಉಂಟಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೃಷಿ ಅಂಕಿ-ಅಂಶಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಂಗಾಮಿನ ಆರಂಭದಿಂದ ಅಂತ್ಯದವರೆಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಅಂಕಿ-ಅಂಶಗಳಲ್ಲಿ ಯಾವುದೇ ವ್ಯತ್ಯಾಸ ಅಥವಾ ಗೊಂದಲ ಇರಬಾರದು. ಕಂದಾಯ ಸೇರಿದಂತೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಬೆಳೆ ಸಮೀಕ್ಷೆ ಮತ್ತು ಅಂಕಿ-ಅಂಶಗಳ ಸಂಗ್ರಹಣೆಯನ್ನು ನಿಖರವಾಗಿ ನಡೆಸಬೇಕು ಎಂದು ಸೂಚಿಸಿದರು.
ಖಾಸಗಿ ಜಂಟಿ ಸಮೀಕ್ಷೆದಾರರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಸಲ್ಲಿಸುವ ಬೆಳೆ ಸಮೀಕ್ಷೆ ವರದಿಗಳನ್ನು ಮೇಲ್ವಿಚಾರಕರು ಕಡ್ಡಾಯವಾಗಿ ಕ್ಷೇತ್ರ ಮಟ್ಟದಲ್ಲಿ ಪರಿಶೀಲಿಸಬೇಕು. ಈ ಜವಾಬ್ದಾರಿಯಲ್ಲಿ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೆಳೆ ವಿಮೆಗೆ ನಿಖರ ಮಾಹಿತಿ ಅಗತ್ಯ
ಕ್ರಾಪ್ ಕಟಿಂಗ್ ಪ್ರಯೋಗಗಳು ಹಾಗೂ ಬೆಳೆ ಸಮೀಕ್ಷೆಗಳಲ್ಲಿ ತಪ್ಪು ಮಾಹಿತಿ ದಾಖಲಾಗಿದರೆ ರೈತರಿಗೆ ಬೆಳೆ ವಿಮೆ ಪಡೆಯುವ ಸಂದರ್ಭದಲ್ಲಿ ತೊಂದರೆ ಉಂಟಾಗುತ್ತದೆ. ವಿಮಾ ಕಂಪನಿಗಳು ಆಕ್ಷೇಪಣೆ ಎತ್ತಲು ಅವಕಾಶ ನೀಡದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಜೋಳದಂತಹ ಸಾಂಪ್ರದಾಯಿಕ ಬೆಳೆಗಳ ವಿಸ್ತೀರ್ಣ ಕಡಿಮೆಯಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ರೈತರಿಗೆ ಆರ್ಥಿಕ ಲಾಭದಾಯಕ ಬೆಳೆಗಳ ಕುರಿತು ಮಾಹಿತಿ ನೀಡುವ ಜೊತೆಗೆ ಬೆಳೆ ವೈವಿಧ್ಯತೆ ಮತ್ತು ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದರು.
ಪಾಳು ಭೂಮಿ ಕೃಷಿಗೆ ಬಳಕೆ ಮಾಡುವಂತೆ ಸೂಚನೆ
ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಉತ್ತಮ ಅವಕಾಶಗಳಿದ್ದು, ಪಾಳು ಭೂಮಿಯನ್ನು ಗುರುತಿಸಿ ಕೃಷಿಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಲು ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಿತ್ತನೆ ಕಾರ್ಯ ಪೂರ್ಣಗೊಂಡ ತಕ್ಷಣವೇ ಪೋರ್ಟಲ್‌ನಲ್ಲಿ ನಿಖರ ಮಾಹಿತಿಯನ್ನು ದಾಖಲಿಸಬೇಕು. ಯಾವುದೇ ಹಂತದಲ್ಲಿ ನಿರ್ಲಕ್ಷ್ಯ ತೋರಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
5.85 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ
ಸಭೆಯಲ್ಲಿ ಜಿಲ್ಲಾ ಸಾಂಖ್ಯಿಕ ಸಂಗ್ರಹಣಾಧಿಕಾರಿ ಬಿ.ಎಸ್. ಪಾಟೀಲ ಜಿಲ್ಲೆಯ ಕೃಷಿ ಅಂಕಿ-ಅಂಶಗಳ ವರದಿ ಮಂಡಿಸಿದರು.
2025-26ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 5,85,777 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಅದರಲ್ಲಿ 1,18,191 ಹೆಕ್ಟೇರ್ ಪ್ರದೇಶ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಮಾಹಿತಿ ನೀಡಿದರು.
ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ 1,54,216 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲ್ಪಟ್ಟ ಪ್ರಮುಖ ಬೆಳೆಯಾಗಿದ್ದರೆ, ಹೆಸರು 1,06,145 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಹಿಂಗಾರು ಹಂಗಾಮಿನಲ್ಲಿ ಕಡಲೆ 1,57,903 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಮೂಲಕ ಪ್ರಮುಖ ಬೆಳೆಯಾಗಿ ಹೊರಹೊಮ್ಮಿದೆ. ಜೋಳ, ಗೋಧಿ ಹಾಗೂ ಸೂರ್ಯಕಾಂತಿಯೂ ಗಣನೀಯ ಪ್ರಮಾಣದಲ್ಲಿ ಬೆಳೆಯಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ, ಭೂದಾಖಲೆಗಳ ಉಪನಿರ್ದೇಶಕ ರುದ್ರಣ್ಣಗೌಡ ಜಿ.ಜೆ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
“ಬೆಳೆ ಸಮೀಕ್ಷೆ ಹಾಗೂ ಕೃಷಿ ಅಂಕಿ-ಅಂಶಗಳಲ್ಲಿ ತಪ್ಪು ಮಾಹಿತಿ ದಾಖಲಾಗಿದರೆ ರೈತರಿಗೆ ಬೆಳೆ ವಿಮೆ ಮತ್ತು ಸರ್ಕಾರಿ ಸೌಲಭ್ಯಗಳ ವಿತರಣೆಯಲ್ಲಿ ತೊಂದರೆ ಉಂಟಾಗುತ್ತದೆ. ಹೀಗಾಗಿ ಅಂಕಿ-ಅಂಶಗಳ ನಿಖರತೆಗೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.”
ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ



