HomeGadag Newsಜನನ-ಮರಣ ನೋಂದಣಿಯಲ್ಲಿ ವಿಳಂಬ ಸಹಿಸುವುದಿಲ್ಲ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

ಜನನ-ಮರಣ ನೋಂದಣಿಯಲ್ಲಿ ವಿಳಂಬ ಸಹಿಸುವುದಿಲ್ಲ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ನಿಗದಿತ ಅವಧಿಯೊಳಗೆ, ದೋಷರಹಿತವಾಗಿ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ನೋಂದಣಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಜನನ-ಮರಣ ನೋಂದಣಿ ಪದ್ಧತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೋಂದಣಿ ಕಾರ್ಯದಲ್ಲಿ ನಿರ್ಲಕ್ಷ್ಯ ಸಹಿಸಲಾಗದು. ನಿರೀಕ್ಷಿತ ಪ್ರಗತಿ ಕಾಣದಿದ್ದರೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳ ಜನನ-ಮರಣ ನೋಂದಣಿ ವೈದ್ಯಾಧಿಕಾರಿಗಳು ಕಡ್ಡಾಯವಾಗಿ ಡಿಜಿಟಲ್ ಕೀ (Digital Key) ಹೊಂದಿರಬೇಕು. ಈ ವಿಷಯದಲ್ಲಿ ಯಾವುದೇ ವಿನಾಯಿತಿ ಅಥವಾ ಕಾರಣಗಳನ್ನು ಒಪ್ಪಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜನನ ಮತ್ತು ಮರಣ ನೋಂದಣಿಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ, ನಾಗರಿಕರಿಗೆ ಅಗತ್ಯವಾಗುವ ವಿವಿಧ ದಾಖಲೆಗಳು, ಸರ್ಕಾರಿ ಸೌಲಭ್ಯಗಳು, ಕಾನೂನು ಪ್ರಕ್ರಿಯೆಗಳು ಹಾಗೂ ಗುರುತಿನ ದಾಖಲೆಗಳ ಮೂಲ ಆಧಾರವಾಗಿದೆ. ಆದ್ದರಿಂದ ನೋಂದಣಿ ಕಾರ್ಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ವಿಳಂಬ ನಡೆಯಬಾರದು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಜನನ ನೋಂದಣಿಯಲ್ಲಿ ಗದಗ, ಮುಂಡರಗಿ ಮುಂಚೂಣಿ

ಜನವರಿಯಿಂದ ಮೇ 2026ರ ಅಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು 6,994 ಜನನ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 5,090 ಪ್ರಕರಣಗಳು (72.78%) ನಿಗದಿತ ಅವಧಿಯೊಳಗೆ ನೋಂದಣಿಯಾಗಿವೆ.

ತಾಲೂಕುವಾರು ಪರಿಶೀಲನೆಯಲ್ಲಿ ಮುಂಡರಗಿ ತಾಲೂಕು 76.56 ಶೇಕಡಾ ಹಾಗೂ ಗದಗ ತಾಲೂಕು 76.43 ಶೇಕಡಾ ಸಾಧನೆಯೊಂದಿಗೆ ಮುಂಚೂಣಿಯಲ್ಲಿವೆ. ಲಕ್ಷ್ಮೇಶ್ವರ 75.79 ಶೇಕಡಾ, ಶಿರಹಟ್ಟಿ 73.68 ಶೇಕಡಾ ಹಾಗೂ ನರಗುಂದ 73.56 ಶೇಕಡಾ ಪ್ರಗತಿ ಸಾಧಿಸಿವೆ. ರೋಣ ತಾಲೂಕು 47.11 ಶೇಕಡಾ ಸಾಧನೆಯೊಂದಿಗೆ ಹಿಂದುಳಿದಿದೆ.

ಮರಣ ನೋಂದಣಿಯಲ್ಲಿ ಶಿರಹಟ್ಟಿ ಮೊದಲ ಸ್ಥಾನ

ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ ಒಟ್ಟು 3,872 ಮರಣ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 2,830 ಪ್ರಕರಣಗಳು (73.09%) ಸಮಯೋಚಿತವಾಗಿ ನೋಂದಣಿಯಾಗಿವೆ.

ಮರಣ ನೋಂದಣಿ ಪ್ರಗತಿಯಲ್ಲಿ ಶಿರಹಟ್ಟಿ ತಾಲೂಕು 79.51 ಶೇಕಡಾ ಸಾಧನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದು, ಮುಂಡರಗಿ 73.77 ಶೇಕಡಾ, ನರಗುಂದ 73.63 ಶೇಕಡಾ, ಗದಗ 71.68 ಶೇಕಡಾ, ರೋಣ 69.91 ಶೇಕಡಾ ಹಾಗೂ ಲಕ್ಷ್ಮೇಶ್ವರ 68.47 ಶೇಕಡಾ ಸಾಧನೆ ದಾಖಲಿಸಿವೆ.

ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಬಿ.ಎಸ್. ಪಾಟೀಲ ಮಾಹಿತಿ ನೀಡಿ, ಜಿಲ್ಲೆಯ ಎರಡು ಆಸ್ಪತ್ರೆಗಳು ಜನನ-ಮರಣ ನೋಂದಣಿ ಕಾರ್ಯದಲ್ಲಿ ಉತ್ತಮ ಸಾಧನೆ ಮಾಡಿದ್ದು, ಇತರೆ ಆಸ್ಪತ್ರೆಗಳೂ ಇದೇ ಮಾದರಿಯನ್ನು ಅನುಸರಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ, ಭೂದಾಖಲೆಗಳ ಉಪನಿರ್ದೇಶಕ ರುದ್ರಣ್ಣಗೌಡ ಜಿ.ಜೆ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರಾಧಾ ಮಣ್ಣೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

“ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ಸಮಯೋಚಿತವಾಗಿ ಹಾಗೂ ದೋಷರಹಿತವಾಗಿ ನಡೆಸುವುದು ಅತ್ಯಂತ ಮಹತ್ವದ್ದಾಗಿದೆ. ಯಾವುದೇ ಕಾರಣಕ್ಕೂ ವಿಳಂಬ ನೋಂದಣಿಗೆ ಅವಕಾಶ ನೀಡಬಾರದು. ನೋಂದಣಿ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಕಾಣದಿದ್ದರೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ.”

– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ, ಗದಗ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!