ಚಿತ್ರದುರ್ಗ: ಸೆಪ್ಟೆಂಬರ್ 14ರಂದು ನಡೆಯಲಿರುವ ಗಣೇಶ ಹಬ್ಬಕ್ಕೂ ಮುನ್ನ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಪರಿಸರ ಸಂರಕ್ಷಣೆಯ ಉದ್ದೇಶದಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಗಣೇಶ ಮೂರ್ತಿಗಳ ತಯಾರಿಕೆ, ದಾಸ್ತಾನು, ಸಾಗಾಟ ಹಾಗೂ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಇನ್ಮುಂದೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಮಾತ್ರ ಅವಕಾಶ ನೀಡುವಂತೆ ಸಚಿವರು ಇಲಾಖೆಗೆ ನಿರ್ದೇಶನ ನೀಡಿದ್ದಾರೆ. POP ಮೂರ್ತಿಗಳು ಮಾರುಕಟ್ಟೆಗೆ ಬಾರದಂತೆ ರಾಜ್ಯದಾದ್ಯಂತ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಇಲಾಖೆಯ ಕಾರ್ಯದರ್ಶಿಗೆ ಲಿಖಿತ ಸೂಚನೆ ನೀಡಿದ್ದಾರೆ.
ಹಳ್ಳಿ ಹಳ್ಳಿಯಲ್ಲೂ ತಪಾಸಣೆ:
ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೆರವು ಪಡೆದು ಗ್ರಾಮೀಣ ಪ್ರದೇಶಗಳಲ್ಲೂ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ.
ಮೂರ್ತಿಗಳ ತಯಾರಿಕೆ, ದಾಸ್ತಾನು, ಸಾಗಾಟ ಅಥವಾ ಮಾರಾಟ ಮಾಡುವುದು ಕಂಡುಬಂದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಜಲಮೂಲಗಳಿಗೆ ಅಪಾಯ:
POP ಗಣೇಶ ಮೂರ್ತಿಗಳಿಗೆ ಬಳಸುವ ಬಣ್ಣಗಳಲ್ಲಿ ಪಾದರಸ, ಕ್ಯಾಡ್ಮಿಯಂ ಹಾಗೂ ಸೀಸದಂತಹ ಭಾರ ಲೋಹಗಳು ಇರುವ ಸಾಧ್ಯತೆಯಿದೆ. ಇಂತಹ ಮೂರ್ತಿಗಳನ್ನು ಕೆರೆ, ನದಿ ಹಾಗೂ ಬಾವಿಗಳಲ್ಲಿ ವಿಸರ್ಜಿಸುವುದರಿಂದ ಜಲಮೂಲಗಳು ಕಲುಷಿತಗೊಳ್ಳುವ ಅಪಾಯವಿದೆ.
ಜಲಮಾಲಿನ್ಯದಿಂದ ಜಲಚರಗಳಿಗೂ ಅಪಾಯ ಎದುರಾಗುವುದಲ್ಲದೆ, ಕಲುಷಿತ ನೀರು ಮನುಷ್ಯರು ಹಾಗೂ ಜಾನುವಾರುಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಬಹುದು ಎಂದು ಸಚಿವರು ಎಚ್ಚರಿಸಿದ್ದಾರೆ.
POP ಮೂರ್ತಿ ವಿಸರ್ಜನೆ ಕಾನೂನುಬಾಹಿರ:
ಜಲ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ, 1974ರ ಕಲಂ 33(ಎ) ಅಡಿಯಲ್ಲಿ ರಾಜ್ಯದ ಜಲಮೂಲಗಳಲ್ಲಿ ಪಿಒಪಿ ಮೂರ್ತಿಗಳ ವಿಸರ್ಜನೆಗೆ ನಿರ್ಬಂಧವಿದೆ ಎಂದು ಸರ್ಕಾರ ತಿಳಿಸಿದೆ.
ಹೀಗಾಗಿ ಧಾರ್ಮಿಕ ಆಚರಣೆಗಳಿಗೆ ಯಾವುದೇ ತೊಂದರೆಯಾಗದಂತೆ ಸಾರ್ವಜನಿಕರು ಈ ಬಾರಿ ಮಣ್ಣಿನ ಹಾಗೂ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಜಲಮೂಲಗಳ ಸಂರಕ್ಷಣೆಗೆ ಸಹಕರಿಸಬೇಕು ಎಂದು ಸಚಿವ ಈಶ್ವರ ಬಿ. ಖಂಡ್ರೆ ಮನವಿ ಮಾಡಿದ್ದಾರೆ.



