ವಿಜಯಸಾಕ್ಷಿ ಸುದ್ದಿ, ಗದಗ
ಕೆಆರ್‌ಐಡಿಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪರ್ವೇಜ್ ಧಾರವಾಡ ನಾಪತ್ತೆಯಾಗಿ ೧೬ ದಿನಗಳು ಕಳೆದರೂ ಪತ್ತೆಯಾಗದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗದಗ ಜಿಲ್ಲಾ ಅಲ್ಪಸಂಖ್ಯಾತರ ಒಕ್ಕೂಟ, ಪರ್ವೇಜ್ ಅವರನ್ನು ಶೀಘ್ರ ಪತ್ತೆಹಚ್ಚಿ ಸುರಕ್ಷಿತವಾಗಿ ಕರೆತರಬೇಕು ಎಂದು ಆಗ್ರಹಿಸಿದೆ.
ಪರ್ವೇಜ್ ಧಾರವಾಡ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶೋಧ ಕಾರ್ಯವನ್ನು ತೀವ್ರಗೊಳಿಸಬೇಕು ಎಂದು ಆಗ್ರಹಿಸಿ ಸೋಮವಾರ ನಗರದಲ್ಲಿ ಅಲ್ಪಸಂಖ್ಯಾತರ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ನಗರದ ವಿವಿಧೆಡೆಯಿಂದ ಆಗಮಿಸಿದ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಪರ್ವೇಜ್ ಅವರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಗುತ್ತಿಗೆದಾರರ ಒತ್ತಡ, ಬಿಲ್ ಬಾಕಿ ಹಾಗೂ ಹಣಕಾಸಿನ ವಿಚಾರಗಳ ಕುರಿತು ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ, ಪ್ರಕರಣದ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಬೇಕು. ಅವರಿಗೆ ಕಿರುಕುಳ ನೀಡಿದವರು ಯಾರು ಎಂಬುದನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪರ್ವೇಜ್ ಅವರ ಕುಟುಂಬ ಆತಂಕದಲ್ಲಿರುವ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು. ನಾಪತ್ತೆ ಪ್ರಕರಣದ ತನಿಖೆಯಲ್ಲಿ ಯಾವುದೇ ಲೋಪವಾಗದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಶೋಧ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸರ್ಕಾರದ ನಡೆಗೆ ಅಲ್ಪಸಂಖ್ಯಾತರ ಆಕ್ರೋಶ
ಗದಗ ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಬಾಷಾಸಾಬ ಮಲ್ಲಸಮುದ್ರ ಮಾತನಾಡಿ, ಪರ್ವೇಜ್ ನಾಪತ್ತೆ ಪ್ರಕರಣದಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ತ್ವರಿತವಾಗಿ ಕಾರ್ಯಪ್ರವೃತ್ತರಾಗಬೇಕು. ಕುಟುಂಬದ ಆತಂಕವನ್ನು ಗಂಭೀರವಾಗಿ ಪರಿಗಣಿಸಿ ಅವರಿಗೆ ಧೈರ್ಯ ತುಂಬುವ ರೀತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪರ್ವೇಜ್ ಅವರನ್ನು ಮೂರು ದಿನಗಳೊಳಗೆ ಪತ್ತೆಹಚ್ಚದಿದ್ದರೆ ಜಿಲ್ಲಾ ಮಟ್ಟದಲ್ಲಿ ಸಭೆ ಕರೆದು ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಮುದಾಯದ ಧರ್ಮಗುರು ಶಬ್ಬೀರ ಮುಪ್ತಿಸಾಬ ಬೋದ್ಲೇಖಾನ, ಅಬ್ದುಲಗಫೂರಸಾಬ ಪಲ್ಲೇದ, ಯೂಸೂಫ್ ಕೊಟ್ಟೂರ, ಆರೀಫ್ ಹುನಗುಂದ, ಕರಿಮಸಾಬ ಸುಣಗಾರ, ಯೂಸೂಫ್ ಡಂಬಳ, ಉಸ್ಮಾನ ಮಾಳೆಕೊಪ್ಪ, ಖಾಲಿದ್ ಕೊಪ್ಪಳ, ಮುನ್ನಾ ಶೇಕ್, ರಾಜೇಸಾಬ ಕಲ್ಮನಿ, ಮುನ್ನಾ ಬಳ್ಳಾರಿ, ರಫೀಕ್ ಜಮಾಲಖಾನ, ಇರ್ಫಾನ್ ಡಂಬಳ, ದಾದು ಮುಂಡರಗಿ, ರಿಯಾಜ್ ಗುಡಿಸಲಮನಿ, ಯಾಸೀನ್ ಖಾಜಿ, ಅಕ್ಬರ್ ಅತ್ತಾರ, ಯೂನೂಸ್ ಕೌತಾಳ, ಎಂ.ಡಿ. ನದಾಫ್, ಎಂ.ಎ. ಅಣ್ಣಿಗೇರಿ, ಸಾಧಿಕ್ ಗುಳಗುಂದಿ, ನಿಜಾಮ್ ಹುಬ್ಬಳ್ಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಒಬ್ಬ ಅಧಿಕಾರಿಯ ಕುಟುಂಬ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವಾಗ ಅವರ ಆತಂಕವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪರ್ವೇಜ್ ಅವರ ಕುಟುಂಬಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಸ್ಪಷ್ಟವಾದ ಕ್ರಮ ಕೈಗೊಳ್ಳಬೇಕು. ಪ್ರಕರಣದ ಸತ್ಯಾಂಶವನ್ನು ಶೀಘ್ರ ಹೊರತರಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು.- ಬಾಷಾಸಾಬ ಮಲ್ಲಸಮುದ್ರ



