ಬೆಂಗಳೂರು: “ಭಾರತದ ಸಾವಿರಾರು ವರ್ಷಗಳಷ್ಟು ಹಳೆಯದಾದ ಯೋಗ ಪರಂಪರೆಗೆ ಜಾಗತಿಕ ಮನ್ನಣೆ ತಂದುಕೊಟ್ಟಿರುವ ಅಂತರರಾಷ್ಟ್ರೀಯ ಯೋಗ ದಿನವು ಇಂದು ವಿಶ್ವದ ಅತಿದೊಡ್ಡ ಆರೋಗ್ಯ ಮತ್ತು ಕ್ಷೇಮ ಅಭಿಯಾನಗಳಲ್ಲಿ ಒಂದಾಗಿ ರೂಪುಗೊಂಡಿದೆ” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಆಯುಷ್ ಇಲಾಖೆಯ ವತಿಯಿಂದ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ–2026 ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗಾಭ್ಯಾಸ ಮಾಡಿದ ಅವರು, ಬಳಿಕ ಮಾತನಾಡಿದರು.
“ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾದ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಅತ್ಯಂತ ವಿಶ್ವಾಸಾರ್ಹ ಸಾಧನವಾಗಿದೆ. ಯೋಗವು ಮನಸ್ಸು ಮತ್ತು ದೇಹದ ಏಕತೆ, ಆಲೋಚನೆ ಮತ್ತು ಕ್ರಿಯೆಯ ಸಮನ್ವಯ, ಸಂಯಮ ಮತ್ತು ತೃಪ್ತಿ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯ ಹಾಗೂ ಆರೋಗ್ಯ ಮತ್ತು ಯೋಗಕ್ಷೇಮದ ಸಮಗ್ರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ,” ಎಂದು ರಾಜ್ಯಪಾಲರು ತಿಳಿಸಿದರು.
“ಇಂದಿನ ಸ್ಪರ್ಧಾತ್ಮಕ ಮತ್ತು ಒತ್ತಡದ ಜೀವನಶೈಲಿಯು ಅನೇಕ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಸೃಷ್ಟಿಸಿದ್ದು, ಅಂತಹ ಸಂದರ್ಭದಲ್ಲಿ ಯೋಗವು ಆರೋಗ್ಯಕರ ದೇಹ, ಶಾಂತ ಮನಸ್ಸು ಮತ್ತು ಸಕಾರಾತ್ಮಕ ದೃಷ್ಟಿಕೋನವನ್ನು ಒದಗಿಸುತ್ತದೆ” ಎಂದು ಅವರು ಹೇಳಿದರು.
“ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಉಪಕ್ರಮದ ಮೇರೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2014ರಲ್ಲಿ ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿರುವುದು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆಯ ವಿಷಯವಾಗಿದೆ. ಇಂದು 190ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಜನರು ಯೋಗವನ್ನು ಅಭ್ಯಾಸ ಮಾಡುತ್ತಿದ್ದು, ಇದು ಭಾರತದ ಜ್ಞಾನ, ಸಂಸ್ಕೃತಿ ಮತ್ತು “ವಸುಧೈವ ಕುಟುಂಬಕಂ” ಎಂಬ ಮನೋಭಾವಕ್ಕೆ ದೊರೆತ ಜಾಗತಿಕ ಮಾನ್ಯತೆಯಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.
“ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕಾಗಿ ಆರೋಗ್ಯವಂತ, ಶಕ್ತಿಯುತ ಹಾಗೂ ಮಾನಸಿಕವಾಗಿ ಸದೃಢ ಯುವಜನತೆ ಅಗತ್ಯವಾಗಿದ್ದು, ಈ ದಿಕ್ಕಿನಲ್ಲಿ ಯೋಗವು ಪರಿಣಾಮಕಾರಿ ಸಾಧನವಾಗಿದೆ. ಯುವಕರು ಪ್ರತಿದಿನ ಸ್ವಲ್ಪ ಸಮಯವನ್ನು ಯೋಗಕ್ಕೆ ಮೀಸಲಿಟ್ಟರೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ತಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು” ಎಂದು ರಾಜ್ಯಪಾಲರು ಕರೆ ನೀಡಿದರು.
“ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯವಾದ “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ವಯೋವೃದ್ಧರನ್ನು ದೈಹಿಕವಾಗಿ ಸಕ್ರಿಯರಾಗಿ, ಮಾನಸಿಕವಾಗಿ ಆರೋಗ್ಯವಂತರಾಗಿ ಮತ್ತು ಸ್ವಾವಲಂಬಿಗಳಾಗಿ ರೂಪಿಸುವಲ್ಲಿ ಯೋಗದ ಮಹತ್ವವನ್ನು ಪ್ರತಿಪಾದಿಸುತ್ತದೆ ಎಂದು ಅವರು ತಿಳಿಸಿದರು. “ನಾನು ಸ್ವತಃ ಯೋಗ ಮತ್ತು ಪ್ರಾಣಾಯಾಮವನ್ನು ಅಳವಡಿಸಿಕೊಂಡಿದ್ದೇನೆ ಮತ್ತು ಅದರ ಪರಿಣಾಮವಾಗಿ ಆರೋಗ್ಯವಾಗಿದ್ದೇನೆ” ಎಂದು ರಾಜ್ಯಪಾಲರು ಹೇಳಿದರು.
ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕಾದ ಅಗತ್ಯವಿದ್ದು, ಪ್ರತಿದಿನ ಕೆಲವೇ ನಿಮಿಷಗಳ ಯೋಗಾಭ್ಯಾಸವು ಅನೇಕ ರೋಗಗಳಿಂದ ರಕ್ಷಿಸಿ ಜೀವನದಲ್ಲಿ ಹೊಸ ಚೈತನ್ಯವನ್ನು ತುಂಬುತ್ತದೆ ಎಂದು ಅವರು ಹೇಳಿದರು.
ಯೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಅದರ ಪ್ರಚಾರಕ್ಕೆ ಕರ್ನಾಟಕ ಸರ್ಕಾರ ಕೈಗೊಂಡಿರುವ ವಿವಿಧ ನವೀನ ಕಾರ್ಯಕ್ರಮಗಳನ್ನು ಶ್ಲಾಘಿಸಿದ ರಾಜ್ಯಪಾಲರು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳು, ಯೋಗ ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು ಹಾಗೂ ಯೋಗ ಸಾಧಕರನ್ನು ಅಭಿನಂದಿಸಿದರು.
“ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ” ಎಂಬ ಸಂದೇಶದೊಂದಿಗೆ ರಾಜ್ಯಪಾಲರು ರಾಜ್ಯದ ಜನತೆಗೆ ಅಂತರರಾಷ್ಟ್ರೀಯ ಯೋಗ ದಿನದ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಸಚಿವರಾದ ಯು.ಟಿ. ಖಾದರ್, ನಟಿ ಸುಧಾರಾಣಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.



