ಅಜ್ಜನ ಜಾತ್ರೆಯ ತೇರೆಳೆಯೋದು ಪಕ್ಕಾ!?

0
Spread the love

ಮೂರೇ ದಿನಕ್ಕೆ ಸೀಮಿತವಾಗಲಿದೆಯಾ ಜಾತ್ರಾ ಮಹೋತ್ಸವ!

Advertisement

ವಿಜಯಸಾಕ್ಷಿ ವಿಶೇಷ ಸುದ್ದಿ, ಕೊಪ್ಪಳ:
ದಕ್ಷಿಣ ಭಾರತದ ಕುಂಭಮೇಳ, ಉತ್ತರದ ಸಿದ್ಧಗಂಗೆ ಎಂದೇ ಖ್ಯಾತವಾಗಿರುವ ಕೊಪ್ಪಳ ಗವಿಮಠದ ಅಜ್ಜನ ಜಾತ್ರಾ ಮಹೊತ್ಸವದ ತೇರೆಳೆಯೋದು ಬಹುತೇಕ ಪಕ್ಕಾ ಆಗಿದೆ.

ಅಧಿಕೃತವಾಗಿ ಈವರೆಗೆ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲವಾದರೂ ಇಂದು ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಸಂಸದ ಕರಡಿ ಸಂಗಣ್ಣ, ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಮತ್ತು ರಾಘವೇಂದ್ರ ಹಿಟ್ನಾಳರವರು ಭೇಟಿ ನೀಡಿ ಇದರ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.

ಗವಿಮಠದ ಜಾತ್ರೆ, ಭಕ್ತರ ಜಾತ್ರೆ. ಭಕ್ತರ ತೀರ್ಮಾನವೇ ನಮ್ಮ ತೀರ್ಮಾನ ಎಂದು ಶ್ರೀಗಳು ಹೇಳಿದ್ಧಾರೆ ಎನ್ನಲಾಗಿದೆ. ಪ್ರತಿಸಲದಂತೆ ಆದ್ದೂರಿಯಾಗಿ ಮಾಡದಿದ್ದರೂ ಸಂಕ್ಷಿಪ್ತವಾಗಿ ರಥೋತ್ಸವ ಕಾರ್ಯಕ್ರಮ ಹಾಗೂ ಮೂರು ದಿನ ದಾಸೋಹ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ.

ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಚಿಂತನಾಗೋಷ್ಠಿಗಳನ್ನು ಹಾಗೂ ಹಾಸ್ಯ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಜಾತ್ರೆಯಲ್ಲಿ ಯಾವುದೆ ರೀತಿಯ ಅಂಗಡಿಗಳು ಮತ್ತು ವಸ್ತು ಪ್ರದರ್ಶನಗಳಿಗೆ ಅವಕಾಶ ನೀಡುವುದಿಲ್ಲ. ಮಳೇಮಲ್ಲೇಶ್ವರದಿಂದ ನಡೆಯುತ್ತಿದ್ದ ಜಾಥಾ ಸಹ ರದ್ದಾಗಿದೆ. ಭಕ್ತಾದಿಗಳು ಎಲ್ಲ ಮುನ್ನೆಚ್ಚರಿಕೆಗಳೊಂದಿಗೆ ಮಾಸ್ಕ್ ಧರಿಸಿ ಬರುವಂತಹ ವ್ಯವಸ್ಥೆ ಮಾಡಿ ಜಾತ್ರೆಯನ್ನು ನಡೆಸೋಣ ಎನ್ನುವ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.

ಆದರೆ ಇದನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಜಿಲ್ಲಾಧಿಕಾರಿಗಳು ಈ ಸಲ ಜಾತ್ರೆ ನಡೆಸುವುದಕ್ಕೆ ಅವಕಾಶ ನೀಡಿಲ್ಲ ಎಂದು ಹೇಳಿದ್ದರು. ಹೀಗಾಗಿ ಇಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಸಭೆ ನಡೆಸಿದ ನಂತರ ಯಾವ ನಿರ್ಣಯ ಕೈಗೊಳ್ಳುತ್ತಾರೆ ಎನ್ನುವ ಕುತೂಹಲ ಮನೆ ಮಾಡಿದೆ.

ಜಿಲ್ಲಾಧಿಕಾರಿಗಳು ಜಾತ್ರೆ ನಡೆಯುವ ಕುರಿತು ಜ.12ರಂದು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೂ ಗವಿಮಠದಿಂದ ಅಧಿಕೃತವಾಗಿ ಘೋಷಣೆಯಾಗುವವರೆಗೆ ಎಲ್ಲವೂ ಇನ್ನೂ ಅನಿರ್ದಿಷ್ಟವಾಗಿದೆ ಎಂದೇ ಹೇಳಬಹುದು.

ಜ.11ರಂದು ಮಹತ್ವದ ಸಭೆ
ಇದೇ ತಿಂಗಳ 11ರಂದು ಮತ್ತೊಮ್ಮೆ ಅಧಿಕಾರಿಗಳ, ಮಠದ ಭಕ್ತರ, ರಥೋತ್ಸವ ಸಂಘಟಕರ ಸಭೆ ನಡೆಯಲಿದ್ದು ಅಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ.


Spread the love

LEAVE A REPLY

Please enter your comment!
Please enter your name here