ವಿಜಯಸಾಕ್ಷಿ ಸುದ್ದಿ, ಮೈಸೂರು
ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಳಿಕ ಅಂತರ ಕಾಯ್ದುಕೊಂಡಿರುವ ಬಹುಕಾಲದ ಆಪ್ತ ಗೆಳೆಯ ಮಾಜಿ ಸಚಿವ ಎಚ್.ಸಿ.ಮಹದೇವಪ್ಪಗೆ ಮಾಜಿ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಶುಕ್ರವಾರ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದಿದ್ದ ಗ್ರಾ.ಪಂ. ಜನಾಧಿಕಾರ ಸಭೆಗೆ ಸಿದ್ದರಾಮಯ್ಯ ಜೊತೆ ಮಹದೇವಪ್ಪ ವೇದಿಕೆ ಹಂಚಿಕೊಂಡಿರಲಿಲ್ಲ. ಅಲ್ಲದೇ, ಇತ್ತೀಚಿನ ದಿನಗಳಲ್ಲಿ ಮಹದೇವಪ್ಪ ಕಾಂಗ್ರೆಸ್ ಪಕ್ಷದಲ್ಲಿ ಅಷ್ಟೊಂದು ಸಕ್ರಿಯವಾಗಿ ಕಾಣಿಸುತ್ತಿಲ್ಲ.
ಚಾಮುಂಡೇಶ್ವರಿಯಲ್ಲಿ ನಾನು ಸೋಲಲು ಜೆಡಿಎಸ್ ಬಿಜೆಪಿ ಜೊತೆ ನಮ್ಮ ಪಕ್ಷದವರೂ ಕಾರಣ. ಪಕ್ಷ ವಿರೋಧಿಗಳು ಆತ್ಮಾವಲೋಕನ ಮಾಡಿಕೊಂಡು ಅವರಾಗಿ ಅವರೇ ಪಕ್ಷ ಬಿಟ್ಟು ಹೋಗಬೇಕು. ಯಾರು ಪಕ್ಷಕ್ಕೆ ವಿರುದ್ಧ ಕೆಲಸ ಮಾಡುತ್ತಾರೋ ಅವರಂತ ಖಳನಾಯಕರು ಯಾರು ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದರು.
ಪಕ್ಷ ತಾಯಿ ಸಮಾನ. ಅಂತಹ ತಾಯಿಗೆ ದ್ರೋಹ ಮಾಡಬಾರದು. ಅಂತಹವರು ಪಕ್ಷ ಬಿಟ್ಟು ಹೋಗಬೇಕು.ಯಾರು ಪಕ್ಷಗಳಿಗೆ ಅನಿವಾರ್ಯವಲ್ಲ, ವ್ಯಕ್ತಿಗಳಿಗೆ ಪಕ್ಷ ಅನಿವಾರ್ಯ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಅವರ ಹೆಸರು ಹೇಳದೆ ಸಿದ್ದರಾಮಯ್ಯ ಕುಟುಕಿದ್ದರು.