ಇಂದು ರಾಜಸ್ತಾನ್ ರಾಯಲ್ಸ್ ಮೊದಲ ಮ್ಯಾಚ್: ಗದಗ ಹುಡುಗ ಅನಿರುದ್ಧ ಜೋಶಿ ಆಡುವನೇ ಐಪಿಎಲ್ ಮ್ಯಾಚ್?

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಗದಗ ಮಣ್ಣಿನಲ್ಲಿ ಪ್ಯಾಡು, ಗ್ಲೌವ್ಸ್ ಹಾಕದೇ ಗಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದ್ದ ‘ನಮ್ಮೂರ ಹುಡುಗ’ ಅನಿರುದ್ಧ ಜೋಶಿ ಈಗ ಸಮುದ್ರದಾಚೆ ಹಾರಿದ್ದಾನೆ. ಅಲ್ಲಿ ಅರಬ್ಬರ ನಾಡಿನಲ್ಲಿ ಈ ಸಲ ಆಡುವ 11ರ ತಂಡದಲ್ಲಿ ನಮ್ಮೂರ ಹುಡುಗನಿಗೆ ಅವಕಾಶ ಸಿಗಲಿದೆಯೇ ಎಂದು ಗದಗ-ಧಾರವಾಡ ಮತ್ತು ಈ ಭಾಗದ ಕ್ರಿಕೆಟ್ ಪ್ರೇಮಿಗಳೆಲ್ಲ ಉತ್ಸಾಹದಿಂದ ಕಾದಿದ್ದಾರೆ.

Advertisement

ಕಳೆದ ವರ್ಷ 2019ರ ಐಪಿಎಲ್ 12ನೇ ಆವೃತ್ತಿಯಲ್ಲಿ ಅನಿರುದ್ಧ ಜೋಶಿ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡದಲ್ಲಿದ್ದರೂ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಅನಿರುದ್ಧ ನಂತರದಲ್ಲಿ ಕರ್ನಾಟಕದ ಟ್ವೆಂಟಿ-20 ಮತ್ತು ಏಕದಿನ ತಂಡಗಳ ಪರ ಆಡಿ ಗಮನಾರ್ಹ ಸಾಧನೆ ಮಾಡಿದ್ದಾನೆ.

ಸತತ ಎರಡು ವರ್ಷ ಸಯೀದ್ ಮುಷ್ತಾಕ್ ಅಲಿ ಟ್ವೆಂಟಿ-20 ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಆದ ಕರ್ನಾಟಕ ತಂಡದಲ್ಲಿದ್ದ ಅನಿರುದ್ಧ ಜೋಶಿ, ಆಲ್‌ರೌಂಡ್ ಆಟದ ಮೂಲಕ ಗಮನ ಸೆಳೆದಿದ್ದ. ಡೆತ್ ಓವರ್‌ಗಳಲ್ಲಿ ಭರ್ಜರಿ ಹೊಡೆತಗಳ ಆಟವಾಡಿ ಕೆಲವು ಕಠಿಣ ಗೆಲವುಗಳನ್ನು ತಂದು ಕೊಟ್ಟಿದ್ದ. ಹೀಗಾಗಿಯೇ ಈ ಸಲ ರಾಜಸ್ತಾನ್ ರಾಯಲ್ಸ್ ತಂಡಕ್ಕೆ ಆಯ್ಕೆ ಆಗಿದ್ದಾನೆ.

ಇಂದು ರಾಜಸ್ತಾನ್ ರಾಯಲ್ಸ್ ಮೊದಲ ಪಂದ್ಯ ಆಡಲಿದ್ದು, ಅನಿರುದ್ಧನಿಗೆ ಆಡುವ 11ರ ತಂಡದಲ್ಲಿ ಅವಕಾಶ ಸಿಗಲಿದೆ ಎಂದೇ ಕ್ರಿಕೆಟ್ ಪ್ರೇಮಿಗಳು ಆಶಾಭಾವನೆ ಇಟ್ಟುಕೊಂಡಿದ್ದಾರೆ.

        ಗದಗಿನಿಂದ ಜರ್ನಿ ಆರಂಭ

ಸಣ್ಣ ನಗರಗಳ ಎಲ್ಲ ಹುಡುಗರಂತೆ ಗಲ್ಲಿ ಕ್ರಿಕೆಟ್‌ನಲ್ಲಿ ಆಡುತ್ತ ಬೆಳೆದ ಅನಿರುದ್ಧ, ನಂತರ ಸ್ವತಃ ಕ್ರಿಕೆಟರ್ ಆಗಿದ್ದ ಅವರ ತಂದೆ ದಿ. ಅಶೋಕ್ ಜೋಶಿಯವರು ಸ್ಥಾಪಿಸಿದ್ದ ಗದಗ ಕ್ರಿಕೆಟ್ ಅಕಾಡೆಮಿಯಲ್ಲಿ ತಂದೆಯಿಂದ ತರಬೇತಿ ಪಡೆದ. ಮುಂದೆ ಚಿಕ್ಕಪ್ಪ ಸುನೀಲ್ ಜೋಶಿಯ ಮಾರ್ಗದರ್ಶನವೂ ಸಿಕ್ಕಿತು. ಅಶೋಕ್ ಜೋಶಿಯವರ ಅಕಾಡೆಮಿ ಕಾರ್ಯ ಸ್ಥಗಿತಗೊಳಿಸಿದ ನಂತರ, ಮುನ್ನಾ ಗುಳೇದಗುಡ್ಡ ಅವರ ಸ್ಪೋರ್ಟ್ಸ್ ಅಕಾಡೆಮಿ ಆಫ್ ಗದಗನಲ್ಲಿ ಕೋಚಿಂಗ್ ಪಡೆದ.

ಈ ಕ್ಲಬ್ ಪರವಾಗಿ ಕರ್ನಾಟಕ ಕ್ರಿಕೆಟ್ ಮಂಡಳಿ ನಡೆಸುತ್ತಿದ್ದ ಧಾರವಾಡ ವಲಯ ಲೀಗ್ ಪಂದ್ಯಗಳಲ್ಲಿ ಈ ಕ್ಲಬ್ ಪರವಾಗಿಯೇ ಆಡಿ ಮಿಂಚಿದ 2002ರಲ್ಲಿ ರಾಜ್ಯ ಅಂಡರ್-15 ತಂಡದ ಪರ ವಿವಿಧ ರಾಜ್ಯಗಳ ವಿರುದ್ಧ ಆಡಿದ. ನಂತರ ಅಂಡರ್-17, ಅಂಡರ್-19 ತಂಡಗಳಲ್ಲಿ ಸ್ಥಾನ ಗಿಟ್ಟಿಸಿ ಅದರಲ್ಲೂ ಸೈ ಅನಿಸಿಕೊಂಡ.

ಅನಿರುದ್ಧನಿಗೆ ದೊಡ್ಡ ಬ್ರೇಕ್ ನೀಡಿದ್ದು ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್). ಮೊದಲಿಗೆ ನಮ್ಮ ಶಿವಮೊಗ್ಗ ತಂಡದ ಪರ ಆಡಿ ತಾನೊಬ್ಬ ಟ್ವೆಂಟಿ-20 ಪರ್ಫೆಕ್ಟ್ ಪ್ಲೇಯರ್ ಎಂಬುದನ್ನು ಸಾಬೀತು ಪಡಿಸಿದ. ನಂತರದ ವರ್ಷಗಳಲ್ಲಿ ವಿವಿಧ ಕೆಪಿಎಲ್ ತಂಡಗಳಲ್ಲಿ ಅವಕಾಶ ಗಿಟ್ಟಿಸಿದ. ಅಷ್ಟರಲ್ಲಾಗಲೇ, ರಾಜ್ಯ ಕ್ರಿಕೆಟ್ ಆಯ್ಕೆದಾರರ ಗಮನ ಸೆಳೆದಿದ್ದ ಅನಿರುದ್ಧ ರಾಜ್ಯದ ಏಕದಿನ ಮತ್ತು ಟ್ವೆಂಟಿ-20 ತಂಡಗಳ ಖಾಯಂ ಸದಸ್ಯನಾದ.

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ಸತತ ಎರಡು ವರ್ಷ ಚಾಂಪಿಯನ್ ಆಯಿತಲ್ಲ, ಆಗ ಪ್ರಮುಖ ಪಂದ್ಯಗಳಲ್ಲಿ ಅಂತಿಮ ಅಂದರೆ ಡೆತ್ ಓವರ್‌ಗಳಲ್ಲಿ ಅನಿರುದ್ಧ ‘ಗುಡ್ ಫಿನಿಶರ್’ ಎನಿಸಿ, ಗೆಲುವು ತಂದಿದ್ದ. ಈಗ ಈ ಹುಡುಗನಿಗೆ ಸೆ.22 ರಂದು ಆಡುವ ಅವಕಾಶ ಸಿಗಲಿ. ಗದಗ ಕೀರ್ತಿ ಮತ್ತೊಮ್ಮೆ ಕ್ರಿಕೆಟ್ ಜಗತ್ತಿನಲ್ಲಿ ಬೆಳಗುವಂತಾಗಲಿ ಎಂದು ವಿಜಯಸಾಕ್ಷಿ ಹಾರೈಸುತ್ತದೆ.


      ಅವತ್ತಿನ ನಾಟ್‌ಔಟ್ 73

2018ರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರಾಜಸ್ತಾನದ ವಿರುದ್ಧದ ಪಂದ್ಯದಲ್ಲಿ ದೊಡ್ಡ ಮೊತ್ತ ಬೆನ್ನು ಹತ್ತಿದ್ದ ಕರ್ನಾಟಕ ತಂಡ ಸಂಕಷ್ಟದಲ್ಲಿತ್ತು. ಆಗ ಕ್ರೀಸ್‌ಗೆ ಬಂದ ಅನಿರುದ್ಧ ಬಿರುಸಿನ ಹೊಡೆತಗಳ ಮೂಲಕ 73 ರನ್ ಗಳಿಸಿ ರಾಜ್ಯಕ್ಕೆ ಜಯ ತಂದಿದ್ದ. ಈ ಬಲಗೈ ಬ್ಯಾಟ್ಸಮನ್ ಮತ್ತು ಬಲಗೈ ಆಫ್‌ಬ್ರೇಕ್ ಬೌಲರ್ ಕ್ಷಿಪ್ರ ಮಾದರಿಯ ಕ್ರಿಕೆಟ್‌ಗೆ ಸರಿ ಹೊಂದುವ ಆಟಗಾರನಂತೂ ಹೌದು.

ರಾಜಸ್ತಾನ್ ರಾಯಲ್ಸ್ ತಂಡಕ್ಕೂ ಈಗ ಅನಿರುದ್ಧನಂತಹ ಆಲ್‌ರೌಂಡರ್ ಅಗತ್ಯ ಇರುವುದರಿಂದ ಈ ಸಲ ಆಡಲು ಅವಕಾಶ ಸಿಗಲಿದೆ. ಅವಕಾಶ ಸಿಕ್ಕರೆ ಅನಿರುದ್ಧ ಸದುಪಯೋಗ ಮಾಡಿಕೊಂಡು ಬೆಳೆಯುತ್ತಾನೆ.
   
ಮುನ್ನಾ ಗುಳೇದಗುಡ್ಡ, ಕ್ರಿಕೆಟ್ ಕೋಚ್,
     ಸ್ಪೋರ್ಟ್ಸ್ ಅಕಾಡೆಮಿ ಆಫ್ ಗದಗ


Spread the love

LEAVE A REPLY

Please enter your comment!
Please enter your name here