ಚಿಕ್ಕಮಗಳೂರು: ರಸ್ತೆಗೆ ಏಕಾಏಕಿ ಅಡ್ಡ ಬಂದ ನಾಗರ ಹಾವನ್ನು ತಪ್ಪಿಸಲು ಯತ್ನಿಸಿದ ಬೈಕ್ ಸವಾರನ ಎಡವಟ್ಟಿನಿಂದ ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.
ಅಪಘಾತದ ಪರಿಣಾಮ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ತೋಟಕ್ಕೆ ನುಗ್ಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನಾರಾಯಣಪುರ ಗೇಟ್ ರಸ್ತೆಯಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಸವಾರರ ಮುಂದೆ ಬೃಹತ್ ಗಾತ್ರದ ನಾಗರ ಹಾವೊಂದು ಏಕಾಏಕಿ ರಸ್ತೆ ದಾಟಲು ಮುಂದಾಗಿದೆ. ಹಾವನ್ನು ಕಂಡು ಆತಂಕಗೊಂಡ ಬೈಕ್ ಚಾಲಕ ತಕ್ಷಣವೇ ರಸ್ತೆ ಮಧ್ಯದಲ್ಲೇ ಬ್ರೇಕ್ ಹಾಕಿದ್ದಾನೆ. ಈ ವೇಳೆ ಬೈಕ್ನ ಹಿಂಬದಿಯಲ್ಲೇ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನಿಗೆ ವಾಹನ ನಿಯಂತ್ರಿಸಲು ಸಾಧ್ಯವಾಗದೆ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ.
ಬೈಕ್ಗೆ ಗುದ್ದಿದ ಬಳಿಕ ಬಸ್ ಚಾಲಕ ಬ್ರೇಕ್ ಹಾಕಿ ವಾಹನವನ್ನು ನಿಯಂತ್ರಿಸಲು ಪ್ರಯತ್ನಿಸಿದರೂ, ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟದ ಬೇಲಿಯನ್ನು ಮುರಿದು ಒಳನುಗ್ಗಿದೆ. ಅಪಘಾತದ ವೇಳೆ ಬಸ್ನಲ್ಲಿ ಹಲವಾರು ಪ್ರಯಾಣಿಕರಿದ್ದರೂ, ಚಾಲಕನ ಸಮಯಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದೆ. ಬಸ್ ತೋಟಕ್ಕೆ ನುಗ್ಗುತ್ತಿದ್ದಂತೆಯೇ ಪ್ರಯಾಣಿಕರು ಆತಂಕಗೊಂಡು ಕಿರುಚಾಡಿದ ಘಟನೆ ನಡೆದಿದೆ.
ಅಪಘಾತದಲ್ಲಿ ಬೈಕ್ನಲ್ಲಿದ್ದ ಇಬ್ಬರು ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಾಹಿತಿ ತಿಳಿದ ಅಜ್ಜಂಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ನಾಗರ ಹಾವನ್ನು ತಪ್ಪಿಸಲು ಮಾಡಿದ ಯತ್ನವೇ ಈ ಅಪಘಾತಕ್ಕೆ ಕಾರಣವಾಗಿರುವುದು ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದೆ.



